×
Ad

ಸುಪ್ರೀಂ ಆದೇಶ ವಿರೋಧಿಸಿ ಮಂಡ್ಯ ಜಿಲ್ಲಾ ಬಂದ್ ;ಬೆಂಗಳೂರು , ಮೈಸೂರಿನಲ್ಲೂ ಪ್ರತಿಭಟನೆ

Update: 2016-09-06 10:09 IST

ಮಂಡ್ಯ, ಸೆ.6: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ವಿರೋಧಿಸಿ  ಕಾವೇರಿ ಹಿತರಕ್ಷಣಾ ಸಮಿತಿ ನೀಡಿರುವ ಮಂಡ್ಯ ಜಿಲ್ಲಾ ಬಂದ್‌ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಡ್ಯದಲ್ಲಿ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.ಯಾವುದೇ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ.
ಮಂಡ್ಯದ ಸಂಜಯ್‌ ಸರ್ಕಲ್ ಸಂಪೂರ್ಣ ಬ್ಲಾಕ್‌ ಆಗಿದೆ.  ಕನ್ನಡಪರ ಸಂಘಟನೆಗಳು ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಕನ್ನಡಪರ ಸಂಘಟನೆಗಳ ಕಾರ್ಯಕರ್ತರು  ರಸ್ತೆ ಮಧ್ಯೆ  ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆಯ  ನಡೆಸುತ್ತಿದ್ದಾರೆ. ಸರಕಾರಿ ಕಚೇರಿಗಳಿಗೆ ಪ್ರತಿಭಟನೆಕಾರರು ಮುತ್ತಿಗೆ ಹಾಕಿದ್ದಾರೆ. ಸರಕಾರಿ ನೌಕರರು ಕಚೇರಿಗೆ ಸ್ವಯಂ ಪ್ರೇರಿತರಾಗಿ ಬೀಗ ಜಡಿದು ಹೊರ ನಡೆದಿದ್ದಾರೆ.
 ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಮಂಡ್ಯದಿಂದ ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ  ವಿವಿಧ ಜಿಲ್ಲೆಗಳಿಗೆ ತೆರಳುವ ಸರಕಾರಿ ಬಸ್ ಗಳು ರಸ್ತೆಗಿಳಿದಿಲ್ಲ. ಜನಸಾಮಾನ್ಯರು , ವಿದ್ಯಾರ್ಥಿಗಳು ಬಸ್‌ ಸಂಪರ್ಕ ಇಲ್ಲದ ಕಾರಣದಿಂದಾಗಿ ಪರದಾಡುವಂತಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ  ಮಂಡ್ಯ ಜಿಲ್ಲೆಯಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ಮಂಡ್ಯ ಜಿಲ್ಲಾಧಿಕಾರಿ ಎಸ್. ಝಿಯಾವುಲ್ಲಾ ರಜೆ ಘೋಷಿಸಿದ್ದಾರೆ.

ಹೈಲೈಟ್ಸ್‌
* ಬೆಂಗಳೂರಿನಿಂದ ತಮಿಳುನಾಡು, ಕೇರಳಕ್ಕೆ  ಬಸ್‌ ಸಂಚಾರ ಸ್ಥಗಿತಗೊಂಡಿದೆ. ಮೈಸೂರಿಂದಲೂ ತಮಿಳುನಾಡಿಗೆ ಕೆಎಸ್ ಆರ್ ಟಿಸಿ ಬಸ್ ಓಡಾಟ ಸ್ಥಗಿತಗೊಂಡಿದೆ

*ತಮಿಳುನಾಡಿನ ತಂಜಾವೂರಿನಿಂದ ಬೆಂಗಳೂರಿಗೆ  ಬೆಳಗ್ಗೆ 6:30.ಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಇದರಿಂದಾಗಿ ಬಸ್ ನ ಮುಂದಿನ ಗಾಜು ಪುಡಿಪುಡಿಯಾಗಿದೆ. ಪ್ರಯಾಣಿಕರಿಗೆ ಗಾಯವಾಗಿಲ್ಲ.

* ಮಂಡ್ಯ ಜಿಲ್ಲೆಯಲ್ಲಿ ಅಂಗಡಿ ಮಂಗಟ್ಟುಗಳು ಮುಚ್ಚಿದ್ದು, ತೆರೆದಿರುವ ಕೆಲವು ಅಂಗಡಿಗಳನ್ನು ಪ್ರತಿಭಟನೆಕಾರರು ಬೈಕ್‌ಗಳಲ್ಲಿ ತೆರಳಿ  ಬಲವಂತವಾಗಿ ಮುಚ್ಚಿಸಿದ್ದಾರೆ. 
*ಮಂಡ್ಯದ ಸಂಜಯ್ ಸರ್ಕಲ್ ನಲ್ಲಿ ಆಟೋ ಚಾಲಕರು ಧರಣಿ. ನಡೆಸುತ್ತಿದ್ದಾರೆ. ಪ್ರತಿಭಟನೆಕಾರರು ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ರಸ್ತೆ ಮಧ್ಯೆ ಕುಳಿತಿದ್ದಾರೆ.
*ಖಾಸಗಿ ವಾಹನಗಳ ಸಂಚಾರಕ್ಕೂ  ಪ್ರತಿಭಟನೆಕಾರರು ಅಡ್ಡಿಯನ್ನುಂಟು ಮಾಡಿದ್ದಾರೆ. 

*ನಟ ಅಂಬರೀಶ್ ಪ್ಲೆಕ್ಸ್ ಕಿತ್ತು ಹಾಕಿದ ಉದ್ರಿಕ್ತರು. ಮುಖ್ಯ ಮಂತ್ರಿ ಕಟೌಟ್ ಗೆ ಸಗಣಿ ಎಸೆಯಲಾಗಿದೆ.

*ಸಂಜಯ್ ಥಿಯೇಟರ್ ಗೆ ನುಗ್ಗಿ ಆಕ್ರೋಶ
*ಡೊಡ್ಡಬ್ಯಾಡರಹಳ್ಳಿ, ಬೆಳಗೋಳದಲ್ಲಿ ರಸ್ತೆಯಲ್ಲಿ  ಟೈರ‍್ ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆಗಾರರು   ಪ್ರತಿಭಟನೆ ನಡೆಸುತ್ತಿದ್ದಾರೆ.

*ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ತಮಿಳು ಚಿತ್ರ  ಪ್ರದರ್ಶನ ಸ್ಥಗಿತ.

*  ಮೈಸೂರು ರಸ್ತೆಯ ಸ್ಯಾ ಟ್ ಲೈಟ್ ಬಸ್ ನಿಲ್ದಾಣದಲ್ಲಿ ಕರವೇ ಧರಣಿ. ತಮಿಳುನಾಡು ಬಸ್ ಗಳ ಮುಂದಿನ  ಗಾಜುಗಳ  ಮೇಲೆ 'ಕಾವೇರಿ ನಮ್ಮದು' ಎಂದು ಹಳದಿ ಬಣ್ಣದಲ್ಲಿ 'ಜಯಾಗೆ ಧಿಕ್ಕಾರ' ಎಂದು ಕೆಂಪು ಬಣ್ಣದಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನೆಕಾರರು.

*ಮೈಸೂರಿನಲ್ಲೂ ಕಾವೇರಿ ಪರ ಹೋರಾಟ

 * ಸಂಜಯ್ ಸರ್ಕಲ್‌ನಲ್ಲಿರುವ ಕಾಂಗ್ರೆಸ್‌ ಕಚೇರಿಗೆ ದಾಳಿ ಫ್ಲೆಕ್ಸ್‌, ಕುರ್ಚಿ ಧ್ವಂಸಗೊಳಿಸಿ ಆಕ್ರೋಶ. ಸ್ಥಳಕ್ಕೆ ಬಂದ ಪೊಲೀಸರೊಂದಿಗೆ ವಾಗ್ವಾದ.
*  ಮಾಜಿ ಸಂಸದೆ ರಮ್ಯಾಗೆ ಧಿಕ್ಕಾರ ಕೂಗಿದ ಪ್ರತಿಭಟನೆಕಾರರು.
*ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನ,  ಪ್ರತಿಭಟನೆಕಾರನ್ನು ಬಂಧಿಸಿದ ಪೊಲೀಸರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News