‘ಸುಪ್ರೀಂ ನಿರ್ದೇಶನ’ ರಾಜ್ಯಕ್ಕೆ ಹಿನ್ನಡೆ: ಎಂ.ಬಿ.ಪಾಟೀಲ್
ವಿಜಯಪುರ, ಸೆ.6: ಕಾವೇರಿ ನದಿ ನೀರು ಬಿಡುಗಡೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವು ರಾಜ್ಯದ ಪಾಲಿಗೆ ಹಿನ್ನಡೆಯುಂಟು ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಲಾಶಯಗಳಲ್ಲಿರುವ ನೀರಿನ ಪರಿಸ್ಥಿತಿ ಕುರಿತು ಸುಪ್ರೀಂಕೋರ್ಟ್‌ಗೆ ಎಲ್ಲ ಮಾಹಿತಿಯನ್ನು ನೀಡಿದ್ದೇವೆ. ಕುಡಿಯುವ ಉದ್ದೇಶಕ್ಕಾಗಿಯೆ 40 ಟಿಎಂಸಿ ನೀರು ಬೇಕು. ರೈತರ ಬೆಳೆಗಳಿಗೂ ನೀರು ಬಿಡಬೇಕಿದೆ ಎಂದರು.
ಸಂಕಷ್ಟದ ಪರಿಸ್ಥಿತಿಯಲ್ಲಿ ಈ ನಿರ್ಣಯ ಪಾಲನೆ ಮಾಡುವುದು ಕಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಂದು ನಡೆಯಲಿರುವ ಸಭೆಯಲ್ಲಿ, ರಾಜ್ಯದ ಹಿತದೃಷ್ಟಿಯಿಂದ ಈ ನಿರ್ಣಯವನ್ನು ಯಾವ ರೀತಿಯಲ್ಲಿ ಎದುರಿಸಬೇಕು. ಜನರಿಗೆ ಯಾವ ರೀತಿಯಲ್ಲಿ ನ್ಯಾಯ ಒದಗಿಸಬೇಕು ಎಂಬ ಕುರಿತು ಚರ್ಚೆ ನಡೆಸಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು.
ಕಾವೇರಿ ಮೇಲುಸ್ತುವಾರಿ ಸಮಿತಿಗೂ ನಮ್ಮ ರಾಜ್ಯದ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ನ್ಯಾಯಾಲಯದಲ್ಲಿ ವಕೀಲರು ಸಮರ್ಥವಾಗಿ ವಾದ ಮಾಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದಾರೆ ಎಂದು ಅವರು ತಿಳಿಸಿದರು.