ಅಂಕೋಲಾ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು: ತಪ್ಪಿದ ಅನಾಹುತ
ಅಂಕೋಲಾ, ಸೆ.6: ಮುಂಬೈನಿಂದ ಮಂಗಳೂರಿನ ಕಡೆಗೆ ಸಾಗುತ್ತಿದ್ದ ಗೂಡ್ಸ್ ರೈಲೊಂದು ಅಂಕೋಲಾ ಸಮೀಪದ ಬೆಳ್ಸೆ ಬಳಿ ಹಳಿ ತಪ್ಪಿದ ಘಟನೆ ಇಂದು 5 ಗಂಟೆಯ ಸುಮಾರಿಗೆ ನಡೆದಿದ್ದು, ಅದೃಷ್ಟವಶಾತ್ ದುರಂತ ತಪ್ಪಿದೆ.
ಇಲ್ಲಿನ ಗುಡ್ಡವೊಂದು ಕುಸಿದ ಪರಿಣಾಮ ರೈಲಿನ 2 ಬೋಗಿಗಳು ಹಳಿತಪ್ಪಿವೆ. ರೈಲು ಸುಮಾರು ದೂರ ಚಲಿಸಿದ್ದು, ಹಿಂಬದಿಯ ಬೋಗಿ ಬೇರ್ಪಟ್ಟು ಹಳಿ ತಪ್ಪಿ ಕೆಳಗಿಳಿದಿದೆ. ಕೂಡಲೇ ಟ್ರಾಕ್‌ಮ್ಯಾನ್ ನಂಜಪ್ಪ ಎನ್ನುವವರು ಸೂಚನೆ ನೀಡಿ ರೈಲನ್ನು ನಿಲ್ಲಿಸಿದ್ದಾರೆ.
ಬೆಳಗ್ಗೆ ಇಲ್ಲಿ ಗುಡ್ಡ ಕುಸಿದಿದ್ದು, ರೈಲ್ವೆ ಇಲಾಖೆಗೆ ಟ್ರಾಕ್‌ಮ್ಯಾನ್ ನಂಜಪ್ಪ ಮಾಹಿತಿ ನೀಡಿದ್ದರು. ಆದರೆ ರೈಲ್ವೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ತೋರಿದ್ದು ಘಟನೆಗೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ.
ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಗೂಡ್ಸ್ ರೈಲಿನ ಬೋಗಿಗಳನ್ನು ತೆರವುಗೊಳಿಸುವವರೆಗೆ ಮತ್ಸ್ಯಗಂಧ ಎಕ್ಸ್‌ಪ್ರೆಸ್, ಮುಂಬೈ ಎಕ್ಸ್‌ಪ್ರೆಸ್, ಎರ್ನಾಕುಲಂ- ಪುಣೆ ಎಕ್ಸ್‌ಪ್ರೆಸ್, ಇಂಟರ್ಸಿಟಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.