‘ಉಡುಪಿ ಚಲೋ’ ಹೋರಾಟಕ್ಕೆ ಜಿಗ್ನೇಶ್ ಮೆವಾನಿ?
ಮಂಗಳೂರು, ಸೆ.7: ದೇಶದೆಲ್ಲೆಡೆ ದಲಿತ ಸಮುದಾಯಗಳ ಮೇಲಿನ ದೌರ್ಜನ್ಯ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿ ಗುಜರಾತ್‌ನ ಉನಾದಲ್ಲಿ ನಡೆದ ಹೋರಾಟದ ಪ್ರೇರಣೆಯ ಭಾಗವಾಗಿ ಕರ್ನಾಟಕದಲ್ಲೂ ಬೃಹತ್ ಚಳವಳಿಯೊಂದು ರೂಪುಗೊಳ್ಳುತ್ತಿದೆ. ಉಡುಪಿಯಲ್ಲಿ ಇತ್ತೀಚೆಗೆ ಗೋರಕ್ಷಕರಿಂದ ಪ್ರವೀಣ್ ಪೂಜಾರಿ ಹತ್ಯೆಯ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿಯಾಗಿ ನಡೆಯಲಿರುವ ಈ ಚಳವಳಿಯಲ್ಲಿ ರಾಜ್ಯದ ಪ್ರಗತಿಪರ ಹೋರಾಟಗಾರರು, ದಲಿತ ಪರ ಚಿಂತಕರು, ಸಾಹಿತಿಗಳು, ಪ್ರಗತಿಪರ ಸ್ವಾಮೀಜಿಗಳನ್ನು ಒಳಗೊಳ್ಳಲಿದೆ. ಈ ಚಳವಳಿಗೆ ‘ಉಡುಪಿ ಚಲೋ’ ಎಂದು ಹೆಸರಿಸಲಾಗಿದ್ದು, ರಾಜ್ಯಮಟ್ಟದ ಈ ಬೃಹತ್ ಚಳವಳಿಯ ಸಮಾವೇಶದಲ್ಲಿ ಗುಜರಾತ್‌ನ ಉನಾ ಹೋರಾಟದ ನಾಯಕ ಜಿಗ್ನೇಶ್ ಮೆವಾನಿ ಭಾಗವಹಿಸುವ ನಿರೀಕ್ಷೆಯಿದೆ.
ಚಳವಳಿಯ ಭಾಗವಾಗಿ ಬೃಹತ್ ಮಟ್ಟದ ವಾಹನ ಜಾಥಾ ಅಕ್ಟೋಬರ್4ರಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದೆ. ಅಲ್ಲಿಂದ ನೆಲಮಂಗಲ, ಕುಣಿಗಲ್, ಚೆನ್ನರಾಯಪಟ್ಟಣ , ಹೊಳೆನರಸಿಪುರ, ಹಾಸನ, ಬೇಲೂರು, ಚಿಕ್ಕಮಗಳೂರು,ಕೊಪ್ಪ, ಉಡುಪಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಸಂಚರಿಸಲಿದೆ, ಈ ಎಲ್ಲಾ ಕೇಂದ್ರಗಳಲ್ಲಿ ಸಭೆ, ಸಮಾವೇಶಗಳನ್ನು ನಡೆಸಿ, ಅಕ್ಟೋಬರ್ 9ರಂದು ಉಡುಪಿಗೆ ತಲುಪಲಿದೆ. ಉಡುಪಿಯಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರಗತಿಪರ, ಜನಪರ, ಸಾಹಿತಿಗಳ ಜತೆ ಬಿರುಸಿನ ಮಾತುಕತೆ, ಚರ್ಚೆಗಳು ನಡೆಯುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚಾಲನಾ ಸಮಿತಿಯನ್ನು ರಚಿಸುವ ಪ್ರಕ್ರಿಯೆಗಳು ನಡೆಯುತ್ತಿವೆ.
ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಆರ್. ಭಾಸ್ಕರ ಪ್ರಸಾದ್, ಹೋರಾಟಗಾರ ಜಿ.ಎನ್. ನಾಗರಾಜ್, ನೂರ್ ಶ್ರೀಧರ್, ಎಸ್.ಸಿ. ದಿನೇಶ್ ಕುಮಾರ್, ಅನಂತ ನಾಯಕ್, ನಂದಕುಮಾರ್ ಮೊದಲಾದವರ ಸಹಭಾಗಿತ್ವದಲ್ಲಿ ಚಳವಳಿಯ ರೂಪುರೇಷೆಗಳು ಸಿದ್ಧಗೊಳ್ಳುತ್ತಿವೆ.