×
Ad

ತುಂಗಭದ್ರಾ ನದಿಯಲ್ಲಿ ಗಣಪತಿ ವಿಸರ್ಜನೆ ವೇಳೆ ಮುಳುಗಿದ ದೋಣಿ: ಹತ್ತಕ್ಕೂ ಅಧಿಕ ಮಂದಿ ನೀರುಪಾಲು?

Update: 2016-09-07 17:27 IST

ಶಿವಮೊಗ್ಗ, ಸೆ. 7: ತುಂಗಾಭದ್ರಾ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡುವ ವೇಳೆ ಆಕಸ್ಮಿಕವಾಗಿ ದೋಣಿ ಮುಳುಗಿ ಸರಿಸುಮಾರು 11 ಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದು, ಸುಮಾರು 12 ಜನ ಈಜಿ ದಡ ಸೇರಿ ಬದುಕುಳಿದಿರುವ ಘಟನೆ ಬುಧವಾರ ಮಧ್ಯಾಹ್ನ ಶಿವಮೊಗ್ಗ ನಗರದಿಂದ ಸುಮಾರು 23 ಕಿ.ಮೀ. ದೂರದಲ್ಲಿರುವ ಹಾಡೋನಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ನೀರುಪಾಲಾದವರು ಹಾಗೂ ಬದುಕುಳಿದವರೆಲ್ಲರೂ ಹಾಡೋನಹಳ್ಳಿ ಗ್ರಾಮದವರೇ ಆಗಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಹಾಗೂ ಯಾರ್ಯಾರು ಎಂಬುವುದು ಸ್ಪಷ್ಟವಾಗಿಲ್ಲ. ಗ್ರಾಮಸ್ಥರು ಹೇಳುವ ಮಾಹಿತಿಯ ಪ್ರಕಾರ ಸರಿಸುಮಾರು 10 ಕ್ಕೂ ಅಧಿಕ ಜನರು ನೀರುಪಾಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಜೆ 4 ಗಂಟೆಯವರೆಗೂ ಯಾವುದೇ ಮೃತದೇಹವನ್ನು ನೀರಿನಿಂದ ಹೊರತೆಗೆಯಲು ಸಾಧ್ಯವಾಗಿಲ್ಲ.

ಅಗ್ನಿಶಾಮಕ ದಳ, ನುರಿತ ಈಜು ತಜ್ಞರು, ಅಕ್ಕಪಕ್ಕದ ಗ್ರಾಮಗಳಲ್ಲಿದ್ದ ದೋಣಿಗಳನ್ನು ಶವಗಳ ಶೋಧ ಕಾರ್ಯಾಚರಣೆಗೆ ಬಳಕೆ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಡೋನಹಳ್ಳಿ ಗ್ರಾಮಕ್ಕೆ ದೌಡಾಯಿಸಿದ್ದಾರೆ. ಸ್ಥಳದಲ್ಲಿಯೇ ಬೀಡುಬಿಟ್ಟು ಶೋಧ ಕಾರ್ಯಾಚರಣೆ ಪರಿಶೀಲನೆ ನಡೆಸುತ್ತಿದ್ದಾರೆ.

ಹಾಡೋನಹಳ್ಳಿ ಗ್ರಾಮದಲ್ಲಿ ಊರಿನ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಗೌರಿ ಹಾಗೂ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಪೂರ್ವಾಹ್ನ 11:30 ರ ವೇಳೆಗೆ ವಿಗ್ರಹಗಳ ಮೆರವಣಿಗೆ ಆರಂಭವಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ನಂತರ ಅಪರಾಹ್ನ 2 ರಿಂದ 2:15 ರ ಸುಮಾರಿಗೆ ತುಂಗಭದ್ರಾ ನದಿಯ ಬಳಿ ವಿಗ್ರಹಗಳ ವಿಸರ್ಜನೆಗೆ ಗ್ರಾಮಸ್ಥರು ಆಗಮಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷ ಕೂಡ ಸುಮಾರು 20 ರಿಂದ 22 ಜನರು ದೋಣಿಯಲ್ಲಿ ಕುಳಿತುಕೊಂಡು ವಿಗ್ರಹಗಳ ವಿಸರ್ಜನೆಗೆ ಮುಂದಾಗಿದ್ದರು. ದಡದಿಂದ ಸರಿಸುಮಾರು 100 ಅಡಿ ದೂರದಲ್ಲಿ ಗೌರಿ ವಿಗ್ರಹವನ್ನು ಯಶಸ್ವಿಯಾಗಿ ವಿಸರ್ಜನೆ ಮಾಡಿ ಹಿಂದಿರುಗಿದ್ದಾರೆ. ತದನಂತರ ಗಣಪತಿ ವಿಗ್ರಹವನ್ನು ದೋಣಿಯಲ್ಲಿ ಕೊಂಡೊಯ್ದು ನದಿಯಲ್ಲಿ ವಿಸರ್ಜನೆ ಮಾಡಿದ್ದಾರೆ. ಈ ವೇಳೆ ದೋಣಿಯು ಒಂದು ಕಡೆ ವಾಲಿಕೊಂಡಿದೆ. ಇದರಿಂದ ಒಳಗೆ ನೀರು ನುಗ್ಗಿದೆ. ಒಂದು ಬದಿಯಲ್ಲಿ ನಿಂತುಕೊಂಡಿದ್ದವರು ಮತ್ತೊಂದು ಬದಿಗೆ ಆಗಮಿಸಿದಾಗ ಮತ್ತೆ ವಾಲಿಕೊಂಡು ನೀರು ಒಳಗೆ ಬಂದಿದೆ. ಇದರಿಂದ ದೋಣಿಯ ಅರ್ಧದಷ್ಟು ನೀರು ತುಂಬಿಕೊಂಡು ಮುಳುಗಲಾರಂಭಿಸಿದೆ ಎನ್ನಲಾಗಿದೆ.

ದೋಣಿ ಮುಳುಗುತ್ತಿದ್ದ ವೇಳೆ ಆತಂಕಗೊಂಡು ಕೆಲವರು ದೋಣಿಯಿಂದ ನೀರಿಗೆ ಜಿಗಿದಿದ್ದಾರೆ. ಮತ್ತೆ ಕೆಲವರು ದೋಣಿ ಸಮೇತ ನೀರು ಪಾಲಾಗಿದ್ದಾರೆ. ಈಜು ಗೊತ್ತಿದ್ದ ಸರಿಸುಮಾರು 10 ರಿಂದ 12 ಜನರು ಈಜಿಕೊಂಡು ದಡ ಸೇರಿದ್ದಾರೆ. ಈ ವೇಳೆ ಒಂದಿಬ್ಬರನ್ನು ಕೆಲವರು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ. ಉಳಿದವರು ನೀರು ಪಾಲಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ದುರಂತ ವೀಕ್ಷಿಸಿದ ದಡದಲ್ಲಿದ್ದವರು ನೀರಿಗೆ ಧುಮುಕಿ ಮುಳುಗುತ್ತಿದ್ದವರ ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ದೋಣಿ ಚಲಾಯಿಸುತ್ತಿದ್ದ ನಾವಿಕ ಬದುಕುಳಿದ್ದಿದ್ದು, ಅವರು ಈಜಿ ದಡ ಸೇರಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಬದುಕುಳಿದವ ಹೇಳಿದ್ದು.

ಘಟನೆಯಲ್ಲಿ ಈಜಿಕೊಂಡು ದಡ ಸೇರಿದ ಸಂತೋಷ್ ಎಂಬ ಯುವಕ ಸುದ್ದಿಗಾರರಿಗೆ ಘಟನೆಯ ವಿವರ ನೀಡಿದ್ದಾರೆ. ‘ಗೌರಿ ವಿಗ್ರಹ ವಿಸರ್ಜನೆ ಮಾಡಿದ ನಂತರ ಗಣಪತಿ ವಿಗ್ರಹ ವಿಸರ್ಜನೆಗೆ ದೋಣಿಯಲ್ಲಿ ಸುಮಾರು 20 ರಿಂದ 22 ಜನ ತೆರೆಳಿದ್ದೆವು. ಗಣಪತಿ ವಿಗ್ರಹವನ್ನು ನೀರಿಗೆ ಬಿಟ್ಟ ನಂತರ ಏಕಾಏಕಿ ದೋಣಿಯು ಒಂದು ಕಡೆ ವಾಲಿಕೊಂಡಿತು. ಎಲ್ಲರೂ ಮತ್ತೊಂದು ಕಡೆ ಆಗಮಿಸಿದರು. ಇದರಿಂದ ದೋಣಿಯಲ್ಲಿ ನೀರು ನುಗ್ಗಿ ಮುಳುಗಲಾರಂಭಿಸಿತು. ಭಯದಿಂದ ಕೆಲವರು ನೀರಿಗೆ ಧುಮುಕಿದರು. ಈ ವೇಳೆ ಇಡೀ ದೋಣಿ ಮಗುಚಿಕೊಂಡು ಮುಳುಗಿತು. ತಾವು ಸೇರಿದಂತೆ ಹಲವರು ಈಜಿಕೊಂಡು ದಡ ಸೇರಿದೆವು. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಒಂದಿಬ್ಬರನ್ನು ರಕ್ಷಣೆ ಮಾಡಲಾಗಿದೆ. ಉಳಿದವರು ದೋಣಿ ಸಮೇತ ನೀರು ಪಾಲಾಗಿದ್ದಾರೆ ಎಂದು ಸಂತೋಷ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News