ಸುಪ್ರೀಂ ಕೋರ್ಟ್‌ನ ಆದೇಶ ಖಂಡಿಸಿ ಪ್ರತಿಭಟನೆ
ಸೊರಬ, ಸೆ.7: ಮಳೆ ಇಲ್ಲದೆ ಬರಗಾಲ ಎದುರಿಸುತ್ತಿರುವ ರಾಜ್ಯದ ಜನರಿಗೆ ನ್ಯಾಯ ಒದಗಿಸುವ ಬದಲು ಪಕ್ಕದ ತಮಿಳುನಾಡು ರಾಜ್ಯಕ್ಕೆ ಕಾವೇರಿ ನದಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶ ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್.ಜಯಪ್ಪಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂದ ವತಿಯಿಂದ ಸುಪ್ರೀಂ ಕೋರ್ಟ್ ಆದೇಶ ವಿರೋಧಿಸಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಬರಗಾಲದಿಂದಾಗಿ ಕಾವೇರಿ ನದಿಯಲ್ಲಿ ನೀರಿಲ್ಲದೆ ಕೇವಲ ನಗರಗಳಿಗೆ ಕುಡಿಯಲು ಸಾಕಾಗುವಷ್ಟು ಮಾತ್ರ ನೀರಿದ್ದು, ರೈತರು ಬೆಳೆ ಬೆಳೆಯಲು ನೀರಿಲ್ಲದ ಸಂದರ್ಭದಲ್ಲಿ ಪಕ್ಕದ ತಮಿಳುನಾಡು ರಾಜ್ಯಕ್ಕೆ ಬೆಳೆ ಬೆಳೆಯಲು ನೀರು ನೀಡುವಂತೆ ಆದೇಶಿಸಿದೆ. ಸರಕಾರ ಅಧಿಕಾರದ ಹಂಗನ್ನು ತೊರೆದು ಕಾವೇರಿ ನೀರನ್ನು ಉಳಿಸಬೇಕು. ರಾಜ್ಯದ ರೈತರ ಹಾಗೂ ನಗರ ವಾಸಿಗಳ ಕುಡಿಯುವ ನೀರಿನ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಪಟ್ಟಣದ ರಂಗನಾಥ ಸ್ವಾಮಿ ದೇವಾಲಯದ ಮುಂಭಾಗದಿಂದ ಮುಖ್ಯರಸ್ತೆಯಾಗಿ ಮೆರವಣಿಗೆ ನಡೆಸಿ ಪಪಂ ಮುಂಭಾಗದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಾಲೂಕು ಕಚೆೇರಿಗೆ ತೆರಳಿ ತಹಶೀಲ್ದಾರ್ ಎಲ್.ಬಿ.ಚಂದ್ರಶೇಖರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದಭರ್ದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಶಿವಪ್ಪ ಓಟೂರು, ಜಿಲ್ಲಾ ಉಪಾಧ್ಯಕ್ಷ ಶಿವಪೂಜಪ್ಪ ಗೌಡ, ತಾಲೂಕು ಅಧ್ಯಕ್ಷ ಕೆ.ಎನ್. ಹಾಲೇಶಪ್ಪ ಗೌಡ, ಕಾರ್ಯಾಧ್ಯಕ್ಷ ವೇದಮೂರ್ತಿ, ಪ್ರಮುಖರಾದ ಗುತ್ಯಪ್ಪ ಕೊಲ್ಗುಣಸಿ, ಲೋಕಪ್ಪ ಓಟೂರು, ಹನುಮಂತಪ್ಪ ಇಂಡಿಹಳ್ಳಿ, ಮೆಹಬೂಬ್ ಬಾಷಾಸಾಬ್ ಹಿರೇಕಸವಿ, ವೀರಪ್ಪಯ್ಯಗೌಡ ಕತವಾಯಿ ಮತ್ತಿತರರು ಉಪಸ್ಥಿತರಿದ್ದರು.