ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆ: ವಿದ್ಯಾರ್ಥಿಗಳ ಧರಣಿ
ಶಿವಮೊಗ್ಗ, ಸೆ.7: ನಗರದಂಚಿನಲ್ಲಿರುವ ಗ್ರಾಮಗಳಿಗೆ ಸರಕಾರಿ ಸಿಟಿ ಬಸ್‌ನ್ನು ಓಡಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ನಮ್ಮ ಹಕ್ಕು ವೇದಿಕೆಯಡಿ ನಗರದ ಡಿ.ಸಿ.ಕಚೇರಿ ಆವರಣದಲ್ಲಿ ಧರಣಿ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಶಿವಮೊಗ್ಗ-ಹರಿಹರ ರಸ್ತೆಯ ಗೋಂದಿಚಟ್ನಹಳ್ಳಿ, ಮೇಲಿನ ಹನಸವಾಡಿ, ಹೊಳೆ ಹನಸವಾಡಿ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗ ನಗರದಲ್ಲಿ ಸಂಚರಿಸುತ್ತಿರುವ ಜೆನ್ ನರ್ಮ್ ಯೋಜನೆಯ ಸರಕಾರಿ ಸಿಟಿ ಬಸ್‌ಗಳನ್ನು ನಗರದಂಚಿನಲ್ಲಿರುವ ಗ್ರಾಮಗಳಿಗೆ ಓಡಿಸಲು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ಸಂಚಾರ ದುಸ್ತರ: ಮೇಲ್ಕಂಡ ಗ್ರಾಮಗಳು ನಗರದಿಂದ ಕೇವಲ ಐದಾರು ಕಿ.ಮೀ. ದೂರದಲ್ಲಿವೆ. ಆದರೆ ಈ ಗ್ರಾಮಗಳಲ್ಲಿ ಸಮರ್ಪಕ ಸಾರಿಗೆ ಸೌಲಭ್ಯ ಇಲ್ಲವಾಗಿದೆ. ನಗರಕ್ಕೆ ಹತ್ತಿರದಲ್ಲಿದ್ದರೂ ನಗರ ಸಾರಿಗೆ ಬಸ್‌ಗಳ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ಗ್ರಾಮಸ್ಥರು ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ಧರಣಿನಿರತರು ದೂರಿದ್ದಾರೆ. ಶಿವಮೊಗ್ಗ-ಹರಿಹರ ಮಾರ್ಗದಲ್ಲಿ ಪ್ರತಿನಿತ್ಯ ಕೆಎಸ್ಸಾರ್ಟಿಸಿ ಸಂಸ್ಥೆಯ ನೂರಾರು ಬಸ್‌ಗಳು ಹೊರ ಜಿಲ್ಲೆ, ರಾಜ್ಯಗಳಿಗೆ ಸಂಚರಿಸುತ್ತವೆಯಾದರೂ ಇವ್ಯಾವ ಬಸ್‌ಗಳು ನಮ್ಮ ಗ್ರಾಮಗಳಲ್ಲಿ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಸಾವಿರಾರು ಗ್ರಾಮಸ್ಥರು ತೀವ್ರ ತೊಂದರೆ ಎದುರಿಸುವಂತಾಗಿದೆ ಎಂದು ಆರೋಪಿಸಿದ್ದಾರೆೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ನಗರದ ವಿವಿಧ ಶಾಲಾ-ಕಾಲೇಜುಗಳಿಗೆ ಗ್ರಾಮ ಗಳಿಂದ ತೆರಳುತ್ತಾರೆ. ಸಕಾಲಕ್ಕೆ ಬಸ್‌ಗಳಿಲ್ಲದ ಕಾರಣದಿಂದ ಸಮಯಕ್ಕೆ ಸರಿಯಾಗಿ ಶಾಲಾ -ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಶಾಲಾ-ಕಾಲೇಜು ಪೂರ್ಣಗೊಂಡ ನಂತರ ಮನೆಗಳಿಗೆ ಹಿಂದಿರುಗಲು ಹರಸಾಹಸ ಪಡುವಂತಾಗಿದೆ. ಈಗಾಗಲೇ ಗ್ರಾಮಗಳಿಗೆ ಸರಕಾರಿ ಸಿಟಿ ಬಸ್ ಓಡಿಸುವಂತೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಜಿಲ್ಲಾಡಳಿತವಾಗಲಿ, ಕೆಎಸ್ಸಾರ್ಟಿಸಿ ಸಂಸ್ಥೆಯಾಗಲಿ ಯಾವುದೇ ಕ್ರಮಕೈಗೊಂಡಿಲ್ಲ. ಪ್ರಸ್ತುತ ಶಿವಮೊಗ್ಗ ನಗರದಲ್ಲಿ ಜೆನ್ ನರ್ಮ್ ಯೋಜನೆಯ ಸರಕಾರಿ ಸಿಟಿ ಬಸ್‌ಗಳ ಸಂಚಾರ ಆರಂಭಕ್ಕೆ ಹಸಿರು ನಿಶಾನೆ ತೋರಿಸಲಾಗಿದೆ.
ಈ ಬಸ್‌ಗಳನ್ನು ನಗರದಂಚಿನಲ್ಲಿರುವ ಗ್ರಾಮಗಳಿಗೆ ಓಡಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಯಾವುದೇ ವಿಳಂಬ ಧೋರಣೆ ಅನುಸರಿಸಬಾರದು. ನಗರದಂಚಿನಲ್ಲಿರುವ ಗ್ರಾಮಗಳಿಗೆ ಸರಕಾರಿ ಸಿಟಿ ಬಸ್ ಓಡಿಸುವಲ್ಲಿ ಜಿಲ್ಲಾಡಳಿತ ವೇನಾದರೂ ನಿರ್ಲಕ್ಷ್ಯ ಧೋರಣೆ ಅನುಸರಿಸುವುದು ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಧರಣಿನಿರತರು ಎಚ್ಚರಿಕೆ ನೀಡಿದ್ದಾರೆ.