×
Ad

ಶಿವಮೊಗ್ಗ ಜಿಲ್ಲೆ ಬರಪೀಡಿತ ಘೋಷಣೆಗೆ ಆಗ್ರಹ

Update: 2016-09-07 22:06 IST

ಶಿವಮೊಗ್ಗ, ಸೆ.7: ಪ್ರಸ್ತುತ ಮುಂಗಾರು ನೈಋತ್ಯ ಮಾನ್ಸೂನ್ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ವಾಡಿಕೆಯ ಮಳೆಯಾಗಿಲ್ಲ. ಇದರಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಇಡೀ ಜಿಲ್ಲೆಯನ್ನೇ ಬರ ಪೀಡಿತ ಘೋಷಣೆ ಮಾಡಬೇಕೆಂಬ ಕೂಗು ಕೇಳಲಾರಂಭಿಸಿದೆ. ಈ ನಡುವೆ ಜಿಪಂ ಆಡಳಿತವು ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಿಸಲು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರ ಬಳಿಗೆ ಸರ್ವಪಕ್ಷ ಸದಸ್ಯರನ್ನೊಳಗೊಂಡ ನಿಯೋಗ ಕೊಂಡೊಯ್ಯಲು ಗಂಭೀರ ಚಿಂತನೆ ನಡೆಸಿದೆ. ಬುಧವಾರ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಸೊರಬ ತಾಲೂಕನ್ನು ಬರಪೀಡಿತವೆಂದು ರಾಜ್ಯ ಸರಕಾರ ಘೋಷಣೆ ಮಾಡಿದೆ. ಅದೇ ರೀತಿಯಲ್ಲಿ ಜಿಲ್ಲೆಯ ಉಳಿದ ಆರು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲು ಸರಕಾರ ಕ್ರಮಕೈಗೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ. ಆಗಸ್ಟ್ 5, 2016ರಂದು ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಕೊರತೆಯ ಬಗ್ಗೆ ಸದಸ್ಯರು ಚರ್ಚೆ ನಡೆಸಿದ್ದಾರೆ. ಬರಗಾಲದ ಪರಿಸ್ಥಿತಿಯಿರುವುದರಿಂದ ಜಿಲ್ಲೆಯ ಆರು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದರು. ಅದರಂತೆ ಸಭೆೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ ಎಂದರು. ಕ್ರಮಕ್ಕೆ ಸೂಚನೆ: ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಮಳೆಯ ತೀವ್ರ ಕೊರತೆ ಉಂಟಾಗಿರುವುದರಿಂದ ಕೃಷಿ ಚಟುವಟಿಕೆಯ ಮೇಲೆ ಪರಿಣಾಮ ಬೀರಿದೆ. ಪ್ರಮುಖ ಜಲಾಶಯ, ಕೆರೆಕಟ್ಟೆಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಮುಂದೆ ಎದುರಾಗಬಹುದಾದ ಸಂಭಾವ್ಯ ಬರ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರೈತರು, ನಾಗರಿಕರಿಗೆ ತೊಂದರೆಯಾಗದ ರೀತಿಯಲ್ಲಿ ಪರಿಸ್ಥಿತಿ ನಿಭಾವಣೆಗೆ ಮುಂದಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜ್ಯೋತಿ ಎಸ್.ಕುಮಾರ್ ಮಾಹಿತಿ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News