×
Ad

ಬಗರ್‌ಹುಕುಂ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ವಿಳಂಬ: ಮಧು ಬಂಗಾರಪ್ಪ ಟೀಕೆ

Update: 2016-09-07 22:09 IST

ಸಾಗರ, ಸೆ.7: ರಾಜ್ಯದಲ್ಲಿ ಬಗರ್‌ಹುಕುಂ ಹಾಗೂ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ ವಿಳಂಬವಾಗಲು ಕಾಂಗ್ರೆಸ್ ಪಕ್ಷ ಕಾರಣ ಎಂದು ಶಾಸಕ ಮಧು ಬಂಗಾರಪ್ಪದೂರಿದ್ದಾರೆ. ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ತಾಳಗುಪ್ಪ ಹೋಬಳಿ ವ್ಯಾಪ್ತಿಯ ಬಗರ್‌ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರಕಾರದ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿದೆ. ಯಾವ ಜನಪರ ಹಾಗೂ ರೈತಪರ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಸರಕಾರದಿಂದ ಸಾಧ್ಯವಾಗುತ್ತಿಲ್ಲ ಎಂದರು. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾದ ನಂತರ ಬಗರ್‌ಹುಕುಂ ಹಾಗೂ ಅರಣ್ಯಹಕ್ಕು ಕಾಯ್ದೆಗೆ ಸ್ವಲ್ಪಜೀವ ಬಂದಿದೆ. ಸೊರಬ ತಾಲೂಕಿನಲ್ಲಿ ಬಗರ್‌ಹುಕುಂಗೆ ಸಂಬಂಧಪಟ್ಟಂತೆ 5ಸಾವಿರ ಅರ್ಜಿಗಳು ಇದ್ದು, ಈಗಾಗಲೇ 500 ಅರ್ಜಿಗಳ ಅಂತಿಮ ಪರಿಶೀಲನೆ ನಡೆದಿದ್ದು, ಶೀಘ್ರದಲ್ಲಿ ಹಕ್ಕುಪತ್ರ ನೀಡಲಾಗುತ್ತದೆ. ಅದೇ ರೀತಿ ಅರಣ್ಯಹಕ್ಕು ಕಾಯ್ದೆಯಡಿ 24ಸಾವಿರ ಅರ್ಜಿಗಳು ಬಂದಿದೆ. ಕೆಲವು ಗ್ರಾಮ ಅರಣ್ಯ ಸಮಿತಿಗಳ ಅಧ್ಯಕ್ಷರು ನಿಷ್ಕ್ರಿಯರಾಗಿದ್ದು, ಅವರನ್ನು ವಜಾ ಮಾಡಿ, ಹೊಸಬರನ್ನು ನೇಮಕ ಮಾಡಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮ್ಮೀಕಾಂತ ಚಿಮಣೂರು ಅವರಿಗೆ ಸಾಮಾನ್ಯ ಜ್ಞಾನ ಇಲ್ಲ. ಯಾವುದು ಅರಣ್ಯಹಕ್ಕು ಅರ್ಜಿ, ಯಾವುದು ಬಗರ್‌ಹುಕುಂ ಅರ್ಜಿ ಎನ್ನುವ ಕನಿಷ್ಠ ಜ್ಞಾನವೂ ಇಲ್ಲದ ಅವರು ಬೊಗಳೆ ರಾಜಕಾರಣ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಬಗರ್‌ಹುಕುಂ ಹಕ್ಕುಪತ್ರ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ನನಗೆ ಬುದ್ದಿ ಹೇಳುವುದು ಬೇಡ. ಬಗರ್‌ಹುಕುಂ ಮಂಜೂರಾತಿ ಕೋರಿ ಸೊರಬದಿಂದ ಶಿವಮೊಗ್ಗವರೆಗೆ ಪಾದಯಾತ್ರೆ ಮಾಡಿದ್ದರಿಂದ ಕಾಯ್ದೆ ಅನುಷ್ಠಾನಕ್ಕೆ ಸರಕಾರ ಮುಂದಾಗಿದೆ ಎನ್ನುವುದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು. ರಾಜ್ಯ ಸರಕಾರ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಹೇಗೆ ನಿಲ್ಲಿಸಬೇಕು ಎನ್ನುವ ಕುರಿತು ಮೊದಲು ಯೋಚಿಸುವಂತೆ ಲಕ್ಷ್ಮೀಕಾಂತ್ ಸರಕಾರಕ್ಕೆ ಸೂಚನೆ ನೀಡುವುದು ಒಳಿತು. ಹಿಂದೆ ಬಂಗಾರಪ್ಪಅವರು ಮುಖ್ಯಮಂತ್ರಿಯಾಗಿದ್ದಾಗ ತಮಿಳುನಾಡಿಗೆ ನ್ಯಾಯಾಲಯದ ತೀರ್ಪನ್ನು ಮೀರಿ ನೀರು ಬಿಡದೆ ದಿಟ್ಟತನ ತೋರಿದ್ದರು. ರಾಜ್ಯ ಸರಕಾರ ಅದನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು. ತಹಶೀಲ್ದಾರ್ ಎನ್.ಟಿ.ಧರ್ಮೋಜಿರಾವ್, ಕಂದಾಯ ನಿರೀಕ್ಷಕ ಬಂಗಾರಪ್ಪ, ಬಗರ್‌ಹುಕುಂ ಸಮಿತಿ ಸದಸ್ಯರಾದ ಪಿ.ಸುರೇಶ್ ಕೋಲಸಿರಸಿ, ಸರಸ್ವತಮ್ಮ ತಾಳಗುಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News