×
Ad

ಸೌಹಾರ್ದದಿಂದ ಯಶಸ್ಸು ಸಾಧ್ಯ: ಸಾದಿಕ್ ಅಝ್‌ಹರಿ

Update: 2016-09-07 22:10 IST

 ಮೂಡಿಗೆರೆ, ಸೆ.7: ಎಲ್ಲ ಧರ್ಮದ ಜನರು ಸೌಹಾರ್ದದಿಂದ ಕೂಡಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಇದಕ್ಕೆ ಸಾಕ್ಷಿಯಾಗಿ ಬ್ರಿಟಿಷರನ್ನು ನಮ್ಮ ದೇಶದಿಂದ ಓಡಿಸಲು ಅಂದು ಎಲ್ಲ ಧರ್ಮದ ಜನರು ಸೌಹಾರ್ದದಿಂದ ಒಗ್ಗೂಡಿಕೊಂಡು ನಡೆಸಿದ ಹೋರಾಟದ ಫಲದಿಂದಾಗಿಯೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸಾಧ್ಯವಾಯಿತು ಎಂದು ಚಕಮಕ್ಕಿ ಬದ್ರಿಯಾ ಧರ್ಮಗುರು ಸಾದಿಕ್ ಅಝ್‌ಹರಿ ತಿಳಿಸಿದರು.

ಅವರು ಪಟ್ಟಣದ ಜೆ.ಎಂ.ರಸ್ತೆಯಲ್ಲಿ ಸರ್ವಧರ್ಮ ವಿದ್ಯಾಗಣಪತಿ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮರಸ್ಯ ಸಭೆಯಲ್ಲಿ ಮಾತನಾಡಿದರು. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಬದುಕನ್ನು ಉಜ್ವಲಗೊಳಿಸುವುದಿಲ್ಲ. ಮನಸ್ಸಿನ ಅಸ್ತಿತ್ವವೇ ಮಾನವನ ಬದುಕನ್ನು ಅತೀ ಎತ್ತರಕ್ಕೆ ಏರಿಸುತ್ತದೆ. ಮಾನವ ತನ್ನ ಸ್ವಾರ್ಥ ಜೀವನಕ್ಕಾಗಿ ಉಜ್ವಲ ಭವಿಷ್ಯವನ್ನೇ ಮರೆತು ಹೋಗುತ್ತಿದ್ದಾನೆ. ಸಮೃದ್ಧಿ ಸಮಾಜ ನಿರ್ಮಾಣವಾಗಬೇಕಾದರೆ ಮೊದಲು ಮಾನವ ಸಮಾಜ ಸಮೃದ್ಧಿಯಾಗಬೇಕು ಎಂದು ಹೇಳಿದರು.

ಬಣಕಲ್ ಬಾಲಿಕಾ ಮರಿಯಾ ದೇವಾಲಯದ ವಂದನೀಯ ಸ್ವಾಮಿ ಫಾದರ್ ಆಲ್ಬರ್ಟ್ ಡಿಸಿಲ್ವಾ ಮಾತನಾಡಿ, ವಿವಿಧ ಧರ್ಮಗಳಿಂದ ಕೂಡಿದ ನಮ್ಮ ದೇಶದಲ್ಲಿ, ಪ್ರತಿಯೊಬ್ಬರು ಈ ಸಮಾಜವನ್ನು ಒಪ್ಪಿಕೊಂಡು ತಂದೆ, ತಾಯಿ, ಅಣ್ಣ, ತಮ್ಮ, ಬಂಧು, ಬಳಗ, ಗುರು, ಸಂಬಂಧಗಳಿಗೆ ಗೌರವ ನೀಡುತ್ತಾ ಮೊದಲು ಮಾನವರಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ವಿಜಯ ಕುಮಾರ್ ವಹಿಸಿದ್ದರು. ಎಂಈಎಸ್ ಶಾಲೆಯ ಕಾರ್ಯದರ್ಶಿ ಎಂ.ಎಸ್.ಹರೀಶ್, ವಿಎಸ್ ಶಾಲೆಯ ಆಡಳಿತಾಧಿಕಾರಿ ವಿಶ್ವನಾಥ್ ರೈ, ಮಲ್ನಾಡ್ ಮುಸ್ಲಿಮ್ ವೇದಿಕೆ ಅಧ್ಯಕ್ಷ ಸಿ.ಕೆ.ಇಬ್ರಾಹೀಂ, ಚಂದನ್ ಗ್ರೂಪ್ಸ್‌ನ ಮಂಚೇಗೌಡ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News