×
Ad

‘ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಂಪನ್ಮೂಲ ಮಾರಾಟ ಮಾಡುವುದು ದೇಶಪ್ರೇಮವಲ್ಲ’

Update: 2016-09-07 22:22 IST

 ಚಿಕ್ಕಮಗಳೂರು, ಸೆ.7: ದೇಶದ ಸಂಪತ್ತನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರಾಟ ಮಾಡುವುದು ದೇಶಪ್ರೇಮವೇ ಎಂದು ಸಿಪಿಐ(ಎಂಎಲ್) ಪಕ್ಷದ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಪ್ರಶ್ನಿಸಿದರು.

 ಅವರು ಸಿಪಿಐಎಂಎಲ್ ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಆಯ್ದ ಕಾರ್ಯಕರ್ತರಿಗಾಗಿ ನಗರದ ಪಕ್ಷದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ಯಾವುದು ದೇಶಪ್ರೇಮ -ಯಾವುದು ದೇಶದ್ರೋಹ’ ಎಂಬ ವಿಚಾರ ಸಂಕಿರಣ ಕುರಿತು ವಿಚಾರ ಮಂಡನೆ ಮಾಡಿ ಮಾತನಾಡಿದರು. ಸಂಘ-ಪರಿವಾರದವರು ಘೋಷಣೆಯನ್ನು ಕೂಗಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿದ್ದಾರೆ. ಆದರೆ ಕೇಂದ್ರದ ಮೋದಿ ಸರಕಾರ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾದ ಹೆಸರಿನಲ್ಲಿ ವಿದೇಶಿ ಬಂಡವಾಳ ಹೂಡಿಕೆ ನಡೆಸುವುದರ ಮೂಲಕ ದೇಶದ ನೆಲ, ಜಲ, ಸಂಪನ್ಮೂಲಗಳನ್ನು ಬಹುರಾಷ್ಟ್ರೀಯ, ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡುತ್ತಿರುವುದು ದೇಶಪ್ರೇಮವಲ್ಲ, ದೇಶದ್ರೋಹ. ಇದರ ವಿರುದ್ಧ ಹೊರಾಟಕ್ಕೆ ಮುಂದಾಗಲಿ ಎಂದರು. ದೇಶದ ಸೈನಿಕರ ವಿರುದ್ಧ ಕಾಶ್ಮೀರಿ ವಿದ್ಯಾರ್ಥಿಗಳು, ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಘಟಿಸಿದ ವಿಚಾರ ಸಂಕಿರಣದಲ್ಲಿ ಘೋಷಣೆ ಕೂಗಿದ್ದಾರೆ ಎನ್ನುವುದನ್ನು ದೇಶದ್ರೋಹಕ್ಕೆ ಹೋಲಿಕೆ ಮಾಡುವುದರ ಮೂಲಕ ಇಡೀ ರಾಜ್ಯದಲ್ಲಿ ಅಶಾಂತಿಯನ್ನು ಉಂಟು ಮಾಡುವುದರ ಮೂಲಕ ದೇಶಪ್ರೇಮ ಮತ್ತು ದೇಶದ್ರೋಹದ ಚರ್ಚೆಗೆ ಆಸ್ಪದ ನೀಡಿದ್ದಾರೆ ಎಂದು ಹೇಳಿದ ಅವರು, ಕಾಶ್ಮೀರ ಭಾರತದ ಸಿಂಧೂರ ಎಂದೇ ಹೇಳುವ ಜನರಿಗೆ ಕಾಶ್ಮೀರದ ಜನ ಭಾರತೀಯರೆನ್ನುವುದು ತಿಳಿಯದಿರುವುದು ವಿಪರ್ಯಾಸವಾಗಿದೆ ಎಂದರು.

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಬೈಗೂರು ಮಂಜುನಾಥ ಮಾತನಾಡಿ, ಸಂಘ -ಪರಿವಾರದವರಿಗೆ ದೇಶವನ್ನು ಕಟ್ಟುವ ಗುತ್ತಿಗೆ ನೀಡಲಾಗಿಲ್ಲ. ದೇಶದ್ರೋಹದ ಬಗ್ಗೆ ಹೋರಾಟಕ್ಕಿಳಿದ ಸಂಘ -ಪರಿವಾರದವರು ಪ್ರಜಾಪ್ರಭುತ್ವ ದೇಶದಲ್ಲಿ ಹಿಂದೂರಾಷ್ಟ್ರ ಸ್ಥಾಪನೆ ಮಾಡುವ ಗುರಿ ಹೊಂದಿರುವುದು ದೇಶಪ್ರೇಮವೇ? ಬೋಲೋ ಭಾರತ್ ಮಾತಾಕೀ ಎಂಬ ಘೋಷಣೆ ಕೂಗಿದ ಮಾತ್ರಕ್ಕೆ ಇವರು ದೇಶಪ್ರೇಮಿಗಳೇ? ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಂಡ್ಯ ಪ್ರವೀಣ್ ಕೈವಾಡವಿರುವುದು ದೇಶಪ್ರೇಮವೇ ಎಂದು ಪ್ರಶ್ನಿಸಿದರು. ಪಕ್ಷದ ರಾಜ್ಯ ಸಮಿತಿ ಸದಸ್ಯೆಯರಾದ ಲಲಿತಾ ಮಾತನಾಡಿದರು. ವಿ ಪಕ್ಷದ ಚಿಕ್ಕಮಗಳೂರು ಕಾರ್ಯದರ್ಶಿ ಎನ್.ಪಿ. ವೆಂಕಟೇಶ್, ಎನ್.ಆರ್.ಪುರ ಕಾರ್ಯದರ್ಶಿ ಉಮೇಶ್, ಮೂಡಿಗೆರೆ ತಾಲೂಕು ಸಹ ಕಾರ್ಯದರ್ಶಿ ಗೋಪಾಲ್ ಬೆಳಗೂಡು, ಬೊಗಸೆ ನಾಗೇಶ್, ಲೋಕೇಶ್ ಕೆ.ಎಂ. ಬಸವರಾಜ್, ಪರಮೇಶ್ ಸಿ.ಎಚ್., ಮಂಜುನಾಥ್ ಡಿ.ಡಿ. ಮತ್ತಿತರರಿದ್ದರು. ಕೂದುವಳ್ಳಿ ಮಹೇಶ್ ನಿರೂಪಿಸಿ , ಜಗನ್ನಾಥ್ ಸ್ವಾಗತಿಸಿ, ಸಂದೀಪ್ ಬಿ.ಆರ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News