×
Ad

ಕಾಫಿ ಪಾನೀಯದ ಬಗ್ಗೆ ಜಾಗೃತಿ ಮೂಡಿಸಲು ನಿರ್ಧಾರ

Update: 2016-09-07 22:26 IST

ಮಡಿಕೇರಿ, ಸೆ.7: ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನೆಲೆಯಲ್ಲಿ ಅ.1 ರಂದು ಕಾಫಿ ಪಾನೀಯದ ಮಹತ್ವದ ಕುರಿತಂತೆ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸಲು ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ ತೀರ್ಮಾನಿಸಿದೆ.

ಪಾಲಿಬೆಟ್ಟ ಬಳಿಯ ಹಂಚಿಕಾಡುವಿನ ಕೂರ್ಗ್ ಕ್ಲಿಪ್ ರೆಸಾರ್ಟ್‌ನಲ್ಲಿ ಜರಗಿದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ 14ನೆ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷೆ ಪಂದಿಕುತ್ತೀರ ಚಿತ್ರಾಸುಬ್ಬಯ್ಯ ಈ ಬಗ್ಗೆ ಮಾಹಿತಿ ನೀಡಿದರು. ಅ.1ರಂದು ಈ ಬಾರಿ ಎಲ್ಲೆಡೆ ಅಂತಾರಾಷ್ಟ್ರೀಯ ಕಾಫಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ವರ್ಷಗಳಿಂದ ರಾಜ್ಯವ್ಯಾಪಿ ಕಾಫಿ ಪಾನೀಯದ ಬಗ್ಗೆ ಜನಜಾಗೃತಿ ಮೂಡಿಸಿ ಕಾಫಿಯ ಆಂತರಿಕ ಬಳಕೆ ಹೆಚ್ಚಿಸುವಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಮಹಿಳಾ ಕಾಫಿ ಜಾಗೃತಿ ಸಂಘ ಕೂಡ ವಿವಿಧ ಕಾರ್ಯಕ್ರಮ ಆಯೋಜಿಸಲಿದೆ. ಬೈಲುಕುಪ್ಪೆ, ನಿಸರ್ಗಧಾಮ, ಮಡಿಕೇರಿಯ ಪ್ರವಾಸಿ ತಾಣಗಳಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಕಾಫಿಯನ್ನು ಉಚಿತವಾಗಿ ವಿತರಿಸುವ ಮೂಲಕ ಕಾಫಿಯ ಸ್ವಾದ ಮತ್ತು ಮಹತ್ವದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲಾಗುತ್ತದೆ ಎಂದರು.

    

  ಸಂಘದ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದ ಮಾತನಾಡಿ, ಕೇಂದ್ರ ಸರಕಾರದ ನೂತನ ಕಾಫಿ ಕಾಯ್ದೆ ಬಗ್ಗೆ ಮತ್ತಷ್ಟು ಚರ್ಚೆ ನಡೆಯಬೇಕಾಗಿದೆ. ಕಾಫಿ ಮಂಡಳಿಗೆ ಅಧಿಕಾರಿಗಳ ಬದಲಿಗೆ ಕಾಫಿ ಬೆಳೆಗಾರರನ್ನೇ ಅಧ್ಯಕ್ಷರನ್ನಾಗಿಸುವ ನಿಯಮ ಸ್ವಾಗತಾರ್ಹವಾಗಿದ್ದರೂ ಕಾಯ್ದೆಯಲ್ಲಿ ಸಾಕಷ್ಟು ಲೋಪಗಳು ಕಂಡು ಬಂದಿವೆ. ಇಂಥ ಮಹತ್ವದಕಾಯ್ದೆ ಜಾರಿಗೆ ಮುನ್ನ ಕೇಂದ್ರ ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಕಾಫಿ ಬೆಳೆಗಾರರು, ಉದ್ಯಮಿಗಳೊಂದಿಗೆ ಸಾಧಕ ಬಾಧಕಗಳ ಸಂಬಂಧಿತ ಚರ್ಚೆ ನಡೆಸಬೇಕಾಗಿತ್ತು. ಇದ್ಯಾವುದನ್ನೂ ಮಾಡದೇ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವುದು ಆಕ್ಷೇಪಗಳಿಗೆ ಕಾರಣವಾಗಿದೆ ಎಂದರು. ಕಾಫಿ ಕಾಯ್ದೆ ಸಂಬಂಧ ಕೇಂದ್ರ ವಾಣಿಜ್ಯ ಸಚಿವಾಲಯ ಸ್ಪಷ್ಟತೆ ಹೊಂದಿರಬೇಕೆಂದು ಅನಿತಾ ನಂದಾ ತಿಳಿಸಿದರು. ಭಾರತದಲ್ಲಿ ಬೆಳೆಯಲಾಗುತ್ತಿರುವ ಕಾಫಿಯಲ್ಲಿ ಆಂತರಿಕ ಬಳಕೆಗೆ ಕೆಲವು ಪ್ರಮಾಣದಲ್ಲಿ ಮಾತ್ರ ಕಾಫಿ ಬಳಕೆಯಾಗುತ್ತಿದ್ದು, ಬೆಳೆದ ಕಾಫಿಯಲ್ಲಿ ಬಹುಪಾಲು ವಿದೇಶಗಳಿಗೆ ರಫ್ತ್ತಾಗುತ್ತಿದೆ. ಈ ನಿಟ್ಟಿನಲ್ಲಿ ಕಾಫಿಯ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ ಕಾರ್ಯ ಪ್ರವೃತ್ತವಾಗಿದ್ದು, ಸಂಘದಲ್ಲಿ ಪ್ರಸ್ತುತ 320 ಸದಸ್ಯೆಯರಿದ್ದಾರೆ ಎಂದು ಅನಿತಾ ತಿಳಿಸಿದರು.

ಕಾಫಿ ಕಾಯ್ದೆ ಸಂಬಂಧಿತ ವಿಷಯ ಪ್ರಸ್ತಾಪಿಸಿದ ಸದಸ್ಯೆ ಅಜ್ಜಿಕುಟ್ಟೀರ ಕಮಲ ಪೂಣಚ್ಚ, ಕಾಫಿ ನಾಡಾದ ಕೊಡಗಿನ ಬೆಳೆಗಾರರ ಮೇಲೆ ಹೊಸ ಕಾಯ್ದೆ ಮೂಲಕ ಅಧಿಕಾರಿಗಳು ಮತ್ತೊಂದು ಹೊಡೆತ ನೀಡಲು ಸಿದ್ಧರಾಗಿದ್ದಾರೆ. ಇಂಥ ಕಾಯ್ದೆಗೆ ಎಲ್ಲರೂ ಆರಂಭಿಕ ಹಂತದಲ್ಲಿಯೇ ವಿರೋಧ ವ್ಯಕ್ತಪಡಿಸುವಂತೆ ಒತ್ತಾಯಿಸಿದರು.

ಸಂಘದ ಸದಸ್ಯೆ ಬುಟ್ಟಿಯಂಡ ಕೃಪಾ ಸೋಮಯ್ಯ, ಉಪಾಧ್ಯಕ್ಷೆ ಪಾಲೆಕಂಡ ಅನಿತಾ ಅಯ್ಯಣ್ಣ, ಜಂಟಿ ಕಾರ್ಯದರ್ಶಿ ಕಾಯಪಂಡ ಸುಮಾ ತಿಮ್ಮಯ್ಯ, ಖಜಾಂಜಿ ಭಾವನಾ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News