×
Ad

ಅವ್ಯವಹಾರದ ಬಗ್ಗೆ ಸಮಗ್ರ ವರದಿ ನೀಡಿ

Update: 2016-09-07 22:31 IST

 ಶಿವಮೊಗ್ಗ, ಸೆ. 7: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನಡೆದಿರುವ 60 ಲಕ್ಷ ರೂ. ವಂಚನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್ ತಿಳಿಸಿದ್ದಾರೆ. ಬುಧವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವ್ಯವಹಾರ ನಡೆದಿರುವ ಮಾಹಿತಿ ತಿಳಿಯುತ್ತಿದ್ದಂತೆ ಸಿಇಒ ಕೆ.ರಾಕೇಶ್‌ಕುಮಾರ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಇ.ಎಸ್.ಎಂ.ಹರೀಶ್‌ರೊಂದಿಗೆ ಸಮಾಲೋಚನೆ ನಡೆಸಿ ಸಲಹೆ-ಸೂಚನೆ ನೀಡಿದ್ದೇನೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಿ ಎಂದು ತಿಳಿಸಿದ್ದೇನೆ ಎಂದರು. ಅವ್ಯವಹಾರ ಬೆಳಕಿಗೆ ಬಂದ ನಂತರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಈ ಹಿಂದಿನ ವರ್ಷಗಳ ಲೆಕ್ಕಪತ್ರಗಳ ತಪಾಸಣೆಗೂ ಸೂಚನೆ ನೀಡಿದ್ದು, ಈಗಾಗಲೇ ಸಿಇಒರವರು ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ. ಈ ತಂಡವು ಪರಿಶೀಲನಾ ಕಾರ್ಯ ಆರಂಭಿಸಿದೆ ಎಂದು ಹೇಳಿದ್ದಾರೆ. ತನಿಖಾ ತಂಡದ ಪರಿಶೀಲನೆಯ ನಂತರವಷ್ಟೇ ಈ ಹಿಂದಿನಿಂದಲೂ ವಂಚನಾ ಪ್ರಕ್ರಿಯೆ ನಡೆದುಕೊಂಡು ಬಂದಿದೆಯೇ ಎಂಬುವುದರ ಮಾಹಿತಿ ತಿಳಿದುಬರಬೇಕಾಗಿದೆ. ತ್ವರಿತಗತಿಯಲ್ಲಿ ಲೆಕ್ಕಪತ್ರಗಳ ತಪಾಸಣಾ ಕಾರ್ಯ ಪೂರ್ಣಗೊಳಿಸಿ ವರದಿ ನೀಡುವಂತೆ ಸಲಹೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವ್ಯವಹಾರ ಎಸಗಿದ ಆರೋಪದ ಮೇರೆಗೆ ಈಗಾಗಲೇ ಪೊಲೀಸರು ಇಲಾಖೆಯ ಸಿಬ್ಬಂದಿ ಉಲ್ಲಾಸ್ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಸರಕಾರಿ ನೌಕರರ ಸೇವಾ ನಿಯಮಗಳ ಪ್ರಕಾರ ನಿರ್ದಿಷ್ಟ ಅವಧಿಯವರೆಗೆ ಪೊಲೀಸ್ ಬಂಧನದಲ್ಲಿ ಸರಕಾರಿ ನೌಕರರಿದ್ದರೆ ಅವರ ಅಮಾನತು ತನ್ನಿಂತಾನೆ ಆಗಲಿದೆ ಎಂದು ಹೇಳಿದರು. ಕಚೇರಿಯಲ್ಲಿನ ಲೆಕ್ಕಪತ್ರಗಳ ಸಮರ್ಪಕ ಮೇಲ್ವಿಚಾರಣೆ ನಡೆಸಿ, ಯಾವುದೇ ಅಕ್ರಮ, ಅವ್ಯವಹಾರಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸಿ. ಲೋಪ ಎಸಗುವ ಸಿಬ್ಬಂದಿ ವಿರುದ್ಧ್ದ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರಗಿಸಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಲಾಗಿದೆ ಎಂದರು.

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News