ರಾಜ್ಯದ ರೆತರಿಗೆ ಅನ್ಯಾಯವಾಗಲು ಬಿಡಲಾರೆ
ಬೆಂಗಳೂರು, ಸೆ.7: ಕಾವೇರಿ ನದಿ ಜೊತೆ ನಮಗೆ ಕರುಳುಬಳ್ಳಿಯ ಸಂಬಂಧವಿದೆ. ನಮ್ಮ ರೈತರ ಪಾಲಿನ ಜೀವನದಿ ಇದು. ನದಿ ಉಕ್ಕಿ ಹರಿದಾಗ ಸಂಭ್ರಮಿಸುವ ನಮ್ಮ ರೈತ ಸಮುದಾಯ ಬತ್ತಿಹೋದಾಗ ಸಂಕಟಪಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ಆಕಾಶವಾಣಿ ಮೂಲಕ ರಾಜ್ಯದ ಜನತೆಗೆ ಸಂದೇಶ ನೀಡಿದ ಮುಖ್ಯಮಂತ್ರಿ, ಸರಕಾರದ ಮೇಲೆ, ನನ್ನ ಮೇಲೆ ಭರವಸೆ ಇಡಿ. ರೈತನ ಮಗನಾದ ನಾನು ರೈತರಿಗೆ ಅನ್ಯಾಯವಾಗಲು ಖಂಡಿತ ಅವಕಾಶ ನೀಡುವುದಿಲ್ಲ. ಕಾವೇರಿ ಕಣಿವೆಯ ಸುಮಾರು 2.9 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ಸೆ.10ರ ಬದಲು ಸೆ.8ರಿಂದಲೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದರು.
ಕೃಷ್ಣರಾಜ ಸಾಗರ, ಹಾರಂಗಿ, ಹೇಮಾವತಿ ಮತ್ತು ಕಬಿನಿ ಆಗಸ್ಟ್ ಅಂತ್ಯದ ವರೆಗೆ ಸಾಮಾನ್ಯ ವರ್ಷದಲ್ಲಿ 215.70 ಟಿಎಂಸಿ ನೀರು ಹರಿದು ಬರಬೇಕಾಗಿತ್ತು. ಆದರೆ ಮಳೆಯ ಅಭಾವದಿಂದಾಗಿ ಈ ವರ್ಷ ಹರಿದು ಬಂದಿರುವ ನೀರು ಕೇವಲ 114.66 ಟಿಎಂಸಿ ಮಾತ್ರ ಎಂದು ಅವರು ಮಾಹಿತಿ ನೀಡಿದರು.
ಕೃಷಿ ಚಟುವಟಿಕೆಗಾಗಿ 47.71 ಟಿಎಂಸಿ, ಕುಡಿಯುವ ನೀರು ಪೂರೈಕೆಗಾಗಿ 28.08 ಟಿಎಂಸಿ ಮತ್ತು ಕೆರೆ ತುಂಬಿಸುವುದಕ್ಕಾಗಿ 11.58 ಹೀಗೆ ಒಟ್ಟು 87.37 ಟಿಎಂಸಿ ನಮಗೆ ಬೇಕಾಗಿದೆ. ನಮ್ಮ ನಾಲ್ಕು ಜಲಾಶಯಗಳಲ್ಲಿ ಲಭ್ಯ ಇರುವ ನೀರಿನ ಸಂಗ್ರಹ 58.78 ಟಿಎಂಸಿ ಮಾತ್ರ ಎಂದು ಮುಖ್ಯಮಂತ್ರಿ ವಿವರಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ಬಿಡುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಮಧ್ಯಾಂತರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಂದಿನ ಹತ್ತು ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 15 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿದೆ ಎಂದು ಅವರು ತಿಳಿಸಿದರು.
ನಮಗೆ ಕುಡಿಯುವ ನೀರಿಗೂ ತತ್ವಾರ ಇರುವಂತಹ ಸ್ಥಿತಿಯಲ್ಲಿ ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವುದು ನಮಗೆ ಆಘಾತವನ್ನುಂಟು ಮಾಡಿದೆ. ಈ ರೀತಿಯ ಇಕ್ಕಟ್ಟಿನ ಪರಿಸ್ಥಿತಿಯನ್ನು ನಮ್ಮ ರಾಜ್ಯವು ಮಳೆಯ ಕೊರತೆಯಿಂದಾಗಿ 2012-13ರಲ್ಲೂ ಎದುರಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
ಆಗಲೂ ತಮಿಳುನಾಡಿನ ಮೊರೆಯನ್ನು ಆಲಿಸಿದ ಸುಪ್ರೀಂ ಕೋರ್ಟ್ 9 ದಿನಗಳ ಕಾಲ ಪ್ರತಿದಿನ 10 ಸಾವಿರ ಕ್ಯೂಸೆಕ್ಸ್‌ನಂತೆ ಕಾವೇರಿ ನೀರನ್ನು ಆ ರಾಜ್ಯಕ್ಕೆ ಹರಿಸು ವಂತೆ ಆದೇಶ ನೀಡಿತ್ತು. ಆಗ ಆಡಳಿತ ನಡೆಸುತ್ತಿದ್ದ ಸರಕಾರ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಂಡು ಅಷ್ಟು ಪ್ರಮಾಣದ ನೀರನ್ನು ಹರಿಸಿತ್ತು ಎಂದು ಅವರು ಸ್ಮರಿಸಿಕೊಂಡರು.
ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗಿರುವ ನಾವು ನ್ಯಾಯಾಲಯದ ಆದೇಶಕ್ಕೆ ತಲೆಬಾಗಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ. ಆದೇಶವನ್ನು ಪಾಲಿಸದೆ ಇದ್ದರೆ ನ್ಯಾಯಾಂಗ ನಿಂದನೆಯ ಆರೋಪ ವನ್ನು ಎದುರಿಸಬೇಕಾಗುತ್ತದೆ. ಅಂತಹ ದುಸ್ಸಾಹಸಕ್ಕೆ ಇಳಿಯುವುದು ಜಾಣತನದ ನಡೆ ಅಲ್ಲ ಎಂದು ಅವರು ಹೇಳಿದರು.
ಸಂಭವನೀಯ ಪರಿಸ್ಥಿತಿಯ ಸಾಧಕ- ಬಾಧಕ ಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ ಆದೇಶವನ್ನು ಭಾರವಾದ ಮನಸ್ಸಿನಿಂದ ಪಾಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ನ್ಯಾಯಾಂಗದ ಹೋರಾಟದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ರಾಜ್ಯದ ಹಿತಾಸಕ್ತಿಯ ರಕ್ಷಣೆಗಾಗಿ ನಮ್ಮೆಲ್ಲ ಶಕ್ತಿ- ಯುಕ್ತಿಯನ್ನು ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಾಲ್ಕು ದಿನಗಳೊಳಗೆ ಮೇಲುಸ್ತುವಾರಿ ಸಮಿತಿ ಮುಂದೆ ಹೋಗುವಂತೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ನಾವು ತಡಮಾಡದೆ ಮೇಲುಸ್ತುವಾರಿ ಸಮಿತಿ ಮುಂದೆ ಹಾಜರಾಗಿ ರಾಜ್ಯದ ಸಂಕಷ್ಟದ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತೇವೆ. ಇದರ ಜತೆಗೆ ಸುಪ್ರೀಂಕೋರ್ಟ್ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸುಪ್ರೀಂಕೋರ್ಟ್ ಆದೇಶಕ್ಕೆ ರಾಜ್ಯದಲ್ಲಿ ವ್ಯಕ್ತವಾದ ಪ್ರತಿಕ್ರಿಯೆಯನ್ನು ನ್ಯಾಯಾಲಯವು ಗಮನಿಸಿರಬಹುದು ಇದರ ಜತೆಗೆ ರಾಜ್ಯದ ಜನರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂಬ ಭರವಸೆ ನನಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಕಾನೂನು ತಜ್ಞರೂ ಮತ್ತು ಅನುಭವಿ ಗಳನ್ನೊಳಗೊಂಡಿರುವ ನಮ್ಮ ರಾಜ್ಯದ ವಕೀಲರ ತಂಡ ಸಮರ್ಥವಾಗಿ ನದಿನೀರು ವಿವಾದವನ್ನು ನಿರ್ವಹಿಸುತ್ತಾ ಬಂದಿದೆ. ಮುಂದೆಯೂ ನಮ್ಮ ವಕೀಲರು ನಮ್ಮೆಲ್ಲರ ನಿರೀಕ್ಷೆ ಹುಸಿಯಾಗದ ರೀತಿಯಲ್ಲಿ ಕೆಲಸ ಮಾಡುತ್ತಾರೆ. ರಾಜ್ಯದ ಜನತೆ ಅವರ ಮೇಲೆ ಭರವಸೆ ಇಡಬೇಕೆಂದು ಅವರು ಮನವಿ ಮಾಡಿದರು.