×
Ad

ಸರಕಾರಿ ಸೌಲಭ್ಯಗಳ ಸದುಪಯೋಗಕ್ಕೆ ಹಿರಿಯ ನಾಗರಿಕರಿಗೆ ರಾಘವೇಂದ್ರ ಕರೆ

Update: 2016-09-08 21:38 IST

ಮಡಿಕೇರಿ, ಸೆ.8: ಸರಕಾರ ಹಿರಿಯ ನಾಗರಿಕರಿಗಾಗಿ ಹಲವು ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಹಿರಿಯ ನಾಗರಿಕರ ಫೋರಂ ಅಧ್ಯಕ್ಷ ಜಿ.ಟಿ. ರಾಘವೇಂದ್ರ ತಿಳಿಸಿದ್ದಾರೆ.

     

ನಗರದ ಗಾಂಧಿ ಮೈದಾನದಲ್ಲಿ ಗುರುವಾರ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲೆಯ ಹಿರಿಯ ನಾಗರಿಕರ ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಿರಿಯರಿಗೆ ಇಲಾಖೆ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ, ಬಸ್‌ಪಾಸ್ ಸೌಲಭ್ಯಗಳಿವೆ. ಅವುಗಳನ್ನು ಪಡೆದುಕೊಂಡು ಕ್ರಿಯಾಶೀಲರಾಗಿ ಜೀವನ ನಡೆಸುವಂತಾಗಬೇಕು ಎಂದು ಅವರು ತಿಳಿಸಿದರು. ಸಮಾಜದಲ್ಲಿ ಹಿರಿಯರು ಕಿರಿಯರನ್ನು ಮತ್ತು ಕಿರಿಯರು ಹಿರಿಯರನ್ನು ಗೌರವಿಸುವಂತಾದರೆ ಕುಟುಂಬದಲ್ಲಿ ಅನೋನ್ಯ ಜೀವನ ಕಾಣಬಹುದು ಹಾಗೂ ಆತ್ಮ ವಿಶ್ವಾಸದಿಂದ ಹಿರಿಯರು ಬದುಕಿನ ಬಂಡಿ ಸಾಗಿಸಬಹುದು ಎಂದರು.

      ಇಲಾಖಾ ಕಚೇರಿಗಳಲ್ಲಿ ಹಿರಿಯರಿಗೆ ನೀಡುವ ಸೌಲಭ್ಯಗಳು ಸಕಾಲದಲ್ಲಿ ತಲುಪಬೇಕು. ಹಿರಿಯರಿಗೆ ಕೊಡುವ ಪ್ರಮಾಣ ಪತ್ರ, ಮೀಸಲಾತಿ ಸೌಲಭ್ಯಗಳ ಬಗ್ಗೆ ಹಿರಿಯ ನಾಗರಿಕರಿಗೆ ಮಾಹಿತಿಯನ್ನು ನೀಡುವಲ್ಲಿ ಕಾರ್ಯಕ್ರಮ ರೂಪುಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಮಾತನಾಡಿ, ಹಿರಿಯ ನಾಗರಿಕರು ಸರಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಹಿರಿಯ ನಾಗರಿಕರ ಆರೋಗ್ಯ ವೃದ್ಧ್ದಿಸಲು ಕ್ರೀಡಾ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಹಿರಿಯ ನಾಗರಿಕ ಅಭ್ಯರ್ಥಿಗಳನ್ನು ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಇಲಾಖೆ ವತಿಯಿಂದ ಸಹಕರಿಸಲಾಗುವುದು ಎಂದು ಅವರು ತಿಳಿಸಿದರು. 60ರಿಂದ 70 ವರ್ಷದ ಪುರುಷರಿಗೆ 100ಮೀ. ಓಟ, ಶಾಟ್‌ಪುಟ್, ಮಹಿಳೆಯರಿಗೆ 400 ಮೀ. ನಡಿಗೆ, ಥ್ರೋಯಿಂಗ್ ಕ್ರಿಕೆಟ್‌ಬಾಲ್, 71ರಿಂದ 80 ವರ್ಷದ ಪುರುಷರಿಗೆ 800 ಮೀ. ನಡಿಗೆ, ಥ್ರೋಯಿಂಗ್ ಕ್ರಿಕೆಟ್ ಬಾಲ್, ಮಹಿಳೆಯರಿಗೆ 200ಮೀ. ನಡಿಗೆ ಹಾಗೂ ಥ್ರೋಯಿಂಗ್ ಕ್ರಿಕೆಟ್ ಬಾಲ್, 81 ವರ್ಷ ಮೇಲ್ಪಟ್ಟ ವಯೋಮಾನದ ಪುರುಷರಿಗೆ 400 ಮೀ. ನಡಿಗೆ, ಥ್ರೋಯಿಂಗ್ ಕ್ರಿಕೆಟ್ ಬಾಲ್, ಮಹಿಳೆಯರಿಗೆ 100 ಮೀ. ನಡಿಗೆ, ಥ್ರೋಯಿಂಗ್ ಕ್ರಿಕೆಟ್ ಬಾಲ್, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಕಥೆ ಹೇಳುವುದು ಹಾಗೂ ಜಾನಪದ ಗೀತೆಗಳನ್ನು ಹಾಡುವ ಸ್ಪರ್ಧೆಗಳು ನಡೆದವು.

ಸ್ಪರ್ಧೆಗಳಲ್ಲಿ ಹಿರಿಯ ನಾಗರಿಕರು ಭಾಗವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News