×
Ad

ವೈದ್ಯಾಧಿಕಾರಿಗಳ ವಿರುದ್ಧ ಹೆಚ್ಚು ದೂರುಗಳು ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ ಸಿಇಒ

Update: 2016-09-08 21:42 IST

ಶಿಕಾರಿಪುರ, ಸೆ. 8: ಸಾರ್ವಜನಿಕರಿಂದ ಸರಕಾರಿ ವೈದ್ಯಾಧಿಕಾರಿಗಳ ಬಗ್ಗೆ ಹೆಚ್ಚು ದೂರುಗಳು ಕೇಳಿ ಬಂದಿದ್ದು, ವೃತ್ತಿಯ ಪಾವಿತ್ರತೆ ಘನತೆ ಕಾಪಾಡಬೇಕಾದ ವೈದ್ಯರು ತಲೆತಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳದಂತೆ ಜಿಪಂ ಸಿಇಒ ರಾಕೇಶ್‌ಕುಮಾರ್ ವೈದ್ಯರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದರು.

 ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ದಾಖಲೆ, ಕಡತ, ದಾಸ್ತಾನುಗಳನ್ನು ಪರಿಶೀಲಿಸಿದ ಸಿಇಒ ವೈದ್ಯ ಸಿಬ್ಬಂದಿಗೆ ಸೇವೆಯ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು.

    ಸಮಾಜದಲ್ಲಿ ಎಲ್ಲ್ಲ ವೃತ್ತಿಗಿಂತ ವೈದ್ಯ ವೃತ್ತಿ ಪವಿತ್ರವಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತೀ ವೈದ್ಯ ಸಿಬ್ಬಂದಿಗೆ ಹೆಚ್ಚಿನ ಗೌರವವಿದೆ. ಇದಕ್ಕೆ ಧಕ್ಕೆಯಾಗದಂತೆ ಕರ್ತವ್ಯದಲ್ಲಿ ನಿಷ್ಠೆ, ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಲು ತಿಳಿಸಿದ ಅವರು, ಆಸ್ಪತ್ರೆಯಲ್ಲಿನ ವೈದ್ಯ ಸಿಬ್ಬಂದಿಯ ಬಗ್ಗೆ ದೂರುಗಳು ಹೆಚ್ಚಾಗಿದ್ದು, ರೋಗಿಗಳ ನಂಬಿಕೆಗೆ ಚ್ಯುತಿಯಾಗದ ರೀತಿಯಲ್ಲಿ ಸೇವಾ ಶೈಲಿಯನ್ನು ಬದಲಾಯಿಸಿಕೊಳ್ಳಲು ತಿಳಿಸಿದರು. ತಪ್ಪಿದಲ್ಲಿ ಬದಲಾವಣೆ ಮತ್ತಿತರ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಜೊತೆಗೆ ಡಿಜಿಟಲ್ ಎಕ್ಸ್ ರೇ ಯಂತ್ರ ಹಾಗೂ ಕೆಲ ಔಷಧ ಕೊರತೆಯಿದೆ ಎಂದು ವೈದ್ಯ ಸಿಬ್ಬಂದಿ ಸಿಇಒ ಗಮನ ಸೆಳೆದಾಗ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕವಾಗಿ ಯತ್ನಿಸುವುದಾಗಿ ತಿಳಿಸಿದರು.

    ಔಷಧ, ಮಾತ್ರೆ ವಿತರಣೆ ಹಾಗೂ ಸಂಗ್ರಹಣಾ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಆರೋಗ್ಯ ಇಲಾಖೆಯಿಂದ ವಿತರಿಸಲಾಗುವ ಮಾತ್ರೆ ಔಷಧಗಳನ್ನು ರೋಗಿಗಳಿಗೆ ವೈದ್ಯರ ಸಲಹೆ ಮೇರೆಗೆ ಸಮರ್ಪಕವಾಗಿ ವಿತರಿಸುವಂತೆ ಸೂಚಿಸಿ, ಆಸ್ಪತ್ರೆಗೆ ಕೊರತೆಯಿರುವ ಔಷಧ ಹಾಗೂ ಮಾತ್ರೆಗಳನ್ನು ಕೂಡಲೇ ಪೂರೈಸಲು ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಇಒ ಲೋಹಿತ್,ತಾ.ವೈದ್ಯಾಧಿಕಾರಿ ಡಾ.ಮಂಜುನಾಥ,ಆಸ್ಪತ್ರೆಯ ತಜ್ಞ ವೈದ್ಯ ಡಾ.ಶ್ರೀನಿವಾಸ್, ಡಾ.ಈಶ್ವರಪ್ಪ, ಅನಿಲ್‌ಕುಮಾರ್, ಡಾ.ಬಸವರಾಜ ಕುಲಾಲ್ ಸಿಬ್ಬಂದಿ ಮತ್ತಿರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News