ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿ ಕಡ್ಡಾಯ
ಶಿವಮೊಗ್ಗ, ಸೆ. 8: ಮಕ್ಕಳಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳು, ಮಕ್ಕಳ ಕಲ್ಯಾಣ ಸಮಿತಿಯ ಮುಖಾಂತರ ಮಾತ್ರ ಮಕ್ಕಳನ್ನು ದಾಖಲು ಮಾಡಬೇಕಿದ್ದು, ನೇರವಾಗಿ ಪಡೆಯಲು ಅರ್ಹತೆ ಇಲ್ಲವೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಸ್ಪಷ್ಟಪಡಿಸಿದೆ. ಪಾಲನೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಅನಾಥಾಲಯ, ಆಶ್ರಯಧಾಮಗಳು, ತೆರೆದ ತಂಗುದಾ ಣಗಳು, ನಿರ್ಗತಿಕ ಮಕ್ಕಳ ಕುಟಿರ, ಬಾಲ ಕಾರ್ಮಿಕರಿಗಾಗಿ ನಡೆಸುತ್ತಿರುವ ಬ್ರಿಡ್ಜ್ ಶಾಲೆಗಳು, ವಿಶೇಷ ದತ್ತು ಕೇಂದ್ರಗಳು, ಉಜ್ವಲ ಕೇಂದ್ರ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಾನ್ಯತೆ ಪಡೆದ ವಸತಿಯುತ ಸಂಸ್ಥೆಗಳು, ಅರ್ಹ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳ ವಸತಿ ಶಾಲೆಗಳನ್ನು ಹೊರತುಪಡಿಸಿ ಎಲ್ಲ್ಲ ರೀತಿಯ ಮಕ್ಕಳ ಪಾಲನಾ ಸಂಸ್ಥೆಗಳನ್ನು ಬಾಲನ್ಯಾಯ ಕಾಯ್ದೆ 2000ರಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ ಕಾರ್ಯ ನಿರ್ವಹಿಸುವಂತೆ ನಿರ್ದೇಶನ ನೀಡಿದೆ.
ಆದ್ದರಿಂದ ಇದುವರೆಗೂ ನೋಂದಣಿ ಮಾಡಿಸಿಕೊಳ್ಳದಿರುವ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಈ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ನಿಗದಿತ ನಮೂನೆ ಅರ್ಜಿಯನ್ನು ಪಡೆದು ಪ್ರಸ್ತಾವನೆಯನ್ನು ಸಲ್ಲಿಸುವುದು. ಹಾಗೂ ಈಗಾಗಲೇ ನೋಂದಣೆಯಾಗಿದ್ದ ಸಂಸ್ಥೆಗಳು ನೋಂದಣಿ ಅವಧಿ ಮುಗಿಯುವ ಮೂರು ತಿಂಗಳ ಮುಂಚಿತವಾಗಿ ನವೀಕರಣಕ್ಕೆ ಪ್ರಸ್ತಾವನೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು.
ತಪ್ಪಿದಲ್ಲಿ ಅಥವಾ ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಹಾಗೂ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತಿಯ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಸಾರ್ವಜನಿಕರು ತಮ್ಮ ಆಸುಪಾಸಿನಲ್ಲಿ ಇಂತಹ ಸರಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳಿದ್ದಲ್ಲಿ ಸದರಿ ಮಾಹಿತಿಯನ್ನು ವಿಳಾಸದೊಂದಿಗೆ ಕೂಡಲೇ ಹತ್ತಿರದ ಪೊಲೀಸ್ ಠಾಣೆ/ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ/ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆೆ /ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ತಿಳಿಸುವಂತೆ ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಲ್ಕೊಳ, ಶಿವಮೊಗ್ಗ ದೂ.ಸಂ: 08182-251114ನ್ನು ಸಂಪರ್ಕಿಸಬಹುದಾಗಿದೆ.