ಸೆ.25 ರಂದು ಗೋ ಹೆರಿಟೇಜ್ ರನ್-ಕೂರ್ಗ್‌ಗೆ ಚಾಲನೆ: ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜಾ
ಮಡಿಕೇರಿ ಸೆ.8 : ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವುಗಳ ಗೋ-ಯುನೆಸ್ಕೋ ಸಂಸ್ಥೆಯ ಸಹಕಾರದೊಂದಿಗೆ ಮಡಿಕೇರಿಯಲ್ಲಿ ಸೆಪ್ಟಂಬರ್ 25 ರಂದು ಗೋ ಹೆರಿಟೇಜ್ ರನ್-ಕೂರ್ಗ್ ಅನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ತಿಳಿಸಿದ್ದಾರೆ. ಸೆ.25ರಂದು ಬೆಳಗ್ಗೆ 6:30 ಕ್ಕೆ ಗೋ ಹೆರಿಟೇಜ್ ರನ್-ಕೊಡಗು/ಕೂರ್ಗ್ ಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಿಂದ ಫ್ಲಾಗ್ ಆಫ್ ಮಾಡುವ ಮೂಲಕ ಚಾಲನೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಗೋ ಹೆರಿಟೇಜ್ ರನ್-ಕೊಡಗು/ಕೂರ್ಗ್ ಕಾರ್ಯಕ್ರಮವನ್ನು ಜವಾಬ್ದಾರಿಯುತ ಪರಿಸರಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿದೆ ಎಂದರು.
ಈ ಬಗ್ಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇದರಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ಆದಾಯ ಉತ್ತಮಗೊಳ್ಳುತ್ತದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಇದೇ ರೀತಿಯ ಚಟುವಟಿಕೆಗಳನ್ನು ಆಯೋಜಿಸುವ ಮುಖಾಂತರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಈ ಗೋ ಹೆರಿಟೇಜ್ ರನ್-ಕೊಡಗು/ಕೂರ್ಗ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಕೊಡಗು ಜಿಲ್ಲೆಯನ್ನು ಜಗತ್ತಿಗೆ ಪರಿಚಯಿಸಲಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು 5 ಕಿ.ಮೀ., 10 ಕಿ.ಮೀ ಹಾಗೂ 21 ಕಿ.ಮೀ.ಗಳ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಅವಕಾಶವಿದ್ದು, ಗೋ-ಯುನೆಸ್ಕೋ ಸಂಸ್ಥೆಯವರ ಅಂತರ್ಜಾಲ ತಾಣದ ಮುಖಾಂತರ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ಹಾಗೂ ಇದಕ್ಕೆ ಅಭ್ಯರ್ಥಿಗಳು ಗೋ-ಯುನೆಸ್ಕೋ ಸಂಸ್ಥೆಯವರು ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದರು.
ALLSE250
ಜಿಲ್ಲೆಯ ಅಭ್ಯರ್ಥಿಗಳು ಶುಲ್ಕದಲ್ಲಿ ರಿಯಾಯಿತಿ ಪಡೆಯಲು ಕೋಡನ್ನು ಬಳಸಿ ನೋಂದಣಿ ಮಾಡಬೇಕಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ 500 ರಿಂದ 600 ಅಭ್ಯರ್ಥಿಗಳು ಭಾಗವಹಿಸಬಹುದು ಎಂದು ಅಂದಾಜಿಸಲಾಗಿದ್ದು, ಗೋ ಹೆರಿಟೇಜ್ ರನ್-ಕೊಡಗು/ಕೂರ್ಗ್ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಅಂತರ್ಜಾಲ ತಾಣದ ಮುಖಾಂತರ ನೋಂದಾಯಿಸುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರು ಮಾಹಿತಿ ನೀಡಿದ್ದಾರೆ.