ಕಳ್ಳಭಟ್ಟಿ ದಂಧೆ ಆರೋಪ ರಾಜಕೀಯ ಪ್ರೇರಿತ
ಮಡಿಕೇರಿ, ಸೆ.8: ತಿತಿಮತಿ ಗ್ರಾಪಂ ವ್ಯಾಪ್ತಿಯ ಹಾಡಿಗಳಿರುವ ಪ್ರದೇಶದಲ್ಲಿ ಕಳ್ಳಭಟ್ಟಿ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ಅಮಾಯಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ಅಧಿಕಾರಿಗಳು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಪಂ ಸದಸ್ಯರು ಹಾಗೂ ಹಾಡಿಯ ಕೆಲವು ಪ್ರಮುಖರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಪಂ ಸದಸ್ಯೆ ಪಿ.ಎಂ.ವಿಜಯಾ, ಕಳ್ಳಭಟ್ಟಿ ದಂಧೆ ಆರೋಪ ರಾಜಕೀಯರಿ ಪ್ರೇತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಬ್ರು, ರಾಮು, ಶಂಕರ ಹಾಗೂ ಪಾರ್ವತಿ ಎಂಬವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ಇವರುಗಳು ಅಮಾಯಕರಾಗಿದ್ದಾರೆ. ಕಳ್ಳಭಟ್ಟಿ ದಂಧೆ ನಡೆಸುತ್ತಿರುವ ನೈಜ ಆರೋಪಿಗಳನ್ನು ಬಂಧಿಸದೆ ರಾಜಕೀಯ ದುರುದ್ದೇಶದಿಂದ ಗ್ರಾಪಂ ಸದಸ್ಯ ಸುಬ್ರು ವಿರುದ್ಧ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಳ ಒಪ್ಪಂದದಂತೆ ಗ್ರಾಪಂ ಅಧ್ಯಕ್ಷ ಸ್ಥಾನದ ಅಧಿಕಾರ ತಲಾ ಎರಡೂವರೆ ವರ್ಷ ಹಂಚಿಕೆಯಾಗಬೇಕಾಗಿತ್ತು. ಈ ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಹುನ್ನಾರದಿಂದ ಸುಬ್ರು ಅವರನ್ನು ಕಳ್ಳಭಟ್ಟಿ ದಂಧೆಯ ಹೆಸರಿನಲ್ಲಿ ಸಿಲುಕಿಸಲಾಗಿದೆ ಎಂದು ವಿಜಯ ಆರೋಪಿಸಿದರು. ಹಾಡಿ ಭಾಗದಲ್ಲಿ ಕೆಲವರು ಔಷಧಕ್ಕಾಗಿ ಕಳ್ಳಭಟ್ಟಿ ತಯಾರಿಸುವುದು ನಮ್ಮ ಗಮನಕ್ಕೆ ಬಂದಿದೆ. ಹಾಡಿ ಮುಖಂಡರೆಲ್ಲಾ ಜನರ ಸಭೆ ನಡೆಸಿ ಕಳ್ಳಭಟ್ಟಿ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸದ್ಯದಲ್ಲಿಯೇ ಮಾಡಲಾಗುವುದೆಂದು ಅವರು ತಿಳಿಸಿದರು.
ಪ್ರಮುಖರಾದ ಬೋಜ ಮಾತನಾಡಿ, ಗ್ರಾಪಂ ಅಧ್ಯಕ್ಷರು ಕಳ್ಳಭಟ್ಟಿ ದಂಧೆ ನಡೆಯುತ್ತಿರುವುದಕ್ಕೆ ತಾವೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿಕೊಂಡಿದ್ದು, ಇದು ಅತ್ಯಂತ ಖಂಡನೀಯವಾಗಿದೆ. ಹಾಡಿ ಪ್ರದೇಶದಲ್ಲಿ ವಾಸವಿಲ್ಲದ ಅಧ್ಯಕ್ಷರು ಕಳ್ಳಭಟ್ಟಿ ತಯಾರಿಕೆಯ ಸ್ಥಳ ಹಾಗೂ ವಸ್ತುಗಳನ್ನು ಸಾಕ್ಷೀಕರಿಸಲಿ ಎಂದು ಸವಾಲು ಹಾಕಿದರು.
ರಾಜಕೀಯ ದುರುದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಗ್ರಾಪಂ ಅಧ್ಯಕ್ಷರು ಹಾಡಿಗಳ ಅಭಿವೃದ್ಧಿಗೆ ಯಾವುದೇ ಕಾಳಜಿಯನ್ನು ತೋರುತ್ತಿಲ್ಲವೆಂದು ಆರೋಪಿಸಿದರು.
ಈ ಭಾಗದ ಜಿಪಂ ಸದಸ್ಯರು ಕೂಡ ಕಳೆದ ಹತ್ತು ವರ್ಷಗಳಿಂದ ಗಿರಿಜನರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ಶಾಸಕರಾದ ಕೆ.ಜಿ.ಬೋಪಯ್ಯ ಅವರ ಶಿಫಾರಸಿನಿಂದ ತಲಾ ಐವರಿಗೆ ಟಿಲ್ಲರ್ ಹಾಗೂ ಮೋಟರ್ ವಿತರಣೆಯಾಗಿದೆ. ಇದನ್ನು ಸಹಿಸದ ಮಂದಿ ಕಳ್ಳಭಟ್ಟಿ ದಂಧೆಯ ಹಣೆಪಟ್ಟಿ ಕಟ್ಟಿ ಹಾಡಿಯ ಜನರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕಳ್ಳಭಟ್ಟಿ ಸೇವಿಸಿ ವನ್ಯಜೀವಿಗಳು ಮೃತಪಟ್ಟಿವೆ ಎನ್ನುವ ಆರೋಪ ನಿರಾಧಾರವಾಗಿದ್ದು, ಈ ಬಗ್ಗೆ ಆಧಾರ ಒದಗಿಸಲಿ ಎಂದು ಬೋಜ ಒತ್ತಾಯಿಸಿದರು. ಅಬಕಾರಿ ಅಧಿಕಾರಿಗಳು ಅಮಾಯಕರ ವಿರುದ್ಧ ಕಿರುಕುಳ ಮುಂದುವರಿಸಿದರೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪಿ.ಪಿ.ರಾಜು, ಪಿ.ಸಿ.ರಾಮು, ಪಿ.ಆರ್.ಮಣಿ ಹಾಗೂ ಪೊನ್ನು ಉಪಸ್ಥಿತರಿದ್ದರು.