×
Ad

ಸರಕಾರಿ ಯೋಜನೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಆದ್ಯತೆ: ಸಚಿವೆ ಉಮಾಶ್ರೀ

Update: 2016-09-08 23:02 IST

ಬೆಂಗಳೂರು, ಸೆ.8: ರಾಜ್ಯ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡುವ ವೇಳೆ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಆ್ಯಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಹೇಳಿದ್ದಾರೆ. 

ಗುರುವಾರ ವಿಕಾಸಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಕರೆಯಲಾಗಿದ್ದ ಎಲ್ಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರ ಮಹಿಳಾ ಉದ್ದೇಶಿತ ಆಯವ್ಯಯ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಲಿಂಗತ್ವ ಅಲ್ಪಸಂಖ್ಯಾತರು ಸರಕಾರಿ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಿದಾಗ ಆದ್ಯತೆಯ ಮೇರೆಗೆ ಎಲ್ಲ್ಲ ಇಲಾಖೆಗಳು ಅವರಿಗೆ ಅಗತ್ಯ ಸೌಲಭ್ಯ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ನೆರವು ನೀಡಬೇಕು. ಅದು ನಮ್ಮ ಕರ್ತವ್ಯ ಕೂಡ ಎಂದು ಅವರು ಹೇಳಿದರು.

ಹಾಗೆಯೇ ಆ್ಯಸಿಡ್ ದಾಳಿಗೊಳಗಾದ ಮಹಿಳೆಯರು ಮಾನಸಿಕ ವಾಗಿ ಹಾಗೂ ದೈಹಿಕವಾಗಿ ನೊಂದಿರುತ್ತಾರೆ. ಅವರು ಬದುಕಲು ಆತ್ಮಸ್ಥೈರ್ಯವನ್ನು ತುಂಬಿ ಸ್ವಾವಲಂಬಿಗಳಾಗಿ ಬದುಕಲು ಅವರಿಗೆ ಎಲ್ಲ್ಲ ರೀತಿಯ ಸರಕಾರಿ ನೆರವನ್ನು ನೀಡಬೇಕು ಎಂದು ಅವರು ಸೂಚಿಸಿದರು.
ಸರಕಾರದ ಎಲ್ಲ್ಲ ಇಲಾಖೆಗಳಲ್ಲಿಯೂ ಆಯಾ ಇಲಾಖೆಗಳ ಆಯವ್ಯಯದಲ್ಲಿ ಶೇ.33ರಷ್ಟು ಹಣವನ್ನು ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿಯೆ ಮೀಸಲಿಡಬೇಕು. ಈ ಹಿಂದೆ ಈ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಆ ಕುರಿತು ಹಿಂದಿನ ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ನೀಡಿದ ಸೂಚನೆಗಳು ಪಾಲನೆ ಆಗಿವೆಯೆ ಎಂಬುದನ್ನು ಸಚಿವರು ಪರಾಮರ್ಶಿಸಿದರು.

ಮಹಿಳೆಯರ ಆಯವ್ಯಯಕ್ಕೆ ಸಂಬಂಧಿಸಿ ಕೇಳಿದ್ದ ಮಾಹಿತಿ ಒದಗಿಸದ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿಶೇಷವಾಗಿ ಮಹಿಳಾ ಕೈದಿಗಳಿಗೆ ರಂಗತರಬೇತಿ ನೀಡಿ ಅವರ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಗೃಹ ಇಲಾಖೆಗೆ ಅವರು ಸೂಚಿಸಿದರು. ಮಹಿಳಾ ಪೊಲೀಸ್ ಸಿಬ್ಬಂದಿಗೆ ಶೌಚಾಲಯ ವ್ಯವಸ್ಥೆ, ಅವರ ಮಕ್ಕಳಿಗಾಗಿ ಶಿಶುಪಾಲನಾ ಕೇಂದ್ರಗಳನ್ನು ಶೀಘ್ರವೆ ತೆರೆಯಬೇಕೆಂದು ತಿಳಿಸಿದರು. ಗ್ರಾಮೀಣ ಭಾಗಗಳಲ್ಲಿ ಏಕ ಪೋಷಕ ಹೆಣ್ಣು ಮಕ್ಕಳಿಗೆ ಮನೆಗಳನ್ನು ಕೊಡುವುದರ ಬಗ್ಗೆ ವಸತಿ ಇಲಾಖೆಗೆ ಗಮನ ಹರಿಸುವಂತೆ ತಿಳಿಸಿದರು.

ಪ್ರವಾಸೋದ್ಯಮ ಇಲಾಖೆ ಯೋಜನೆಯಲ್ಲಿ ನಿರುದ್ಯೋಗಿ ಯುವ ಜನರಿಗೆ ಟ್ಯಾಕ್ಸಿ ನೀಡುವ ಯೋಜನೆ ಇದ್ದು, ಮಹಿಳೆಯರು ಟ್ಯಾಕ್ಸಿಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಅವರಿಗೆ ಆದ್ಯತೆಯ ಮೇಲೆ ಟ್ಯಾಕ್ಸಿ ವಿತರಿಸಿ ಎಂದು ಸೂಚಿಸಿದರು. ಅಲ್ಲದೆ, ಪ್ರವಾಸೋದ್ಯಮ ತಾಣಗಳ ಗೈಡ್‌ಗಳನ್ನು ನೇಮಿಸುವಾಗ ಮಹಿಳೆಯರಿಗೆ ಆದ್ಯತೆ ನೀಡಬೇಕೆಂದು ಸೂಚಿಸಿದರು. ಲೈಂಗಿಕ ಕಾರ್ಯಕರ್ತೆಯರು ಸರಕಾರಿ ಯೋಜನೆಗಳಿಗಾಗಿ ಅರ್ಜಿ ಸಲ್ಲಿಸಿದಾಗ ಅವರಿಗೆ ನೆರವು ನೀಡುವ ಮೂಲಕ ಲೈಂಗಿಕ ಕಾರ್ಯಕರ್ತೆ ಯರನ್ನು ಮುಖ್ಯವಾಹಿನಿಗೆ ತರಲು ಸಹಕರಿಸಿ ಎಂದು ಹೇಳಿದರು. ಹಿರಿಯನಾಗರಿಕರಿಗೆ ಹೊಸ ಯೋಜನೆಗಳನ್ನು ತರುವ ಪ್ರಯತ್ನ ಮಾಡಬೇಕೆಂದು ನಿರ್ದೇಶಿಸಿದರು. ವೃದ್ಧರಿಗೆ ವಸತಿ ನಿಲಯಗಳನ್ನು ಆರಂಭಿಸುವ ಯೋಜನೆ ಜಾರಿಗೆ ತನ್ನಿ ಎಂದು ಹೇಳಿದರು.
ವಿದ್ಯಾರ್ಜನೆಗಾಗಿ ಪರಿಶಿಷ್ಟ ಜಾತಿ/ಪಂಗಡ/ಹಿಂ.ವರ್ಗಗಳ ಹಾಸ್ಟೆಲ್‌ಗಳಲ್ಲಿ ಇರುವ ಹೆಣ್ಣು ಮಕ್ಕಳ ಭದ್ರತೆಗಾಗಿ ಎಲ್ಲ್ಲ ವಸತಿ ನಿಲಯಗಳಲ್ಲೂ ಸಿಸಿಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿರುವುದನ್ನು ಖಾತ್ರಿಪಡಿಸಿಕೊಳ್ಳಿ ಹಾಗೂ ಇರುವ ಅನುದಾನ ವನ್ನು ಬಳಸಿಕೊಂಡು ಬಟ್ಟೆ ಒಗೆಯಲು ವಾಷಿಂಗ್‌ಮೆಷಿನ್‌ಗಳನ್ನು ಎಲ್ಲ್ಲ ಹಾಸ್ಟೆಲ್‌ಗಳಿಗೂ ವಿತರಿಸಲು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News