×
Ad

ಕಂದು ರೋಗದ ಬಗೆ್ಗ ಆತಂಕಬೇಡ: ಸಚಿವ ಮಂಜು

Update: 2016-09-08 23:03 IST

ಬೆಂಗಳೂರು, ಸೆ. 8: ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಂದು (ಬ್ರುಸೆಲ್ಲಾ) ರೋಗ ಮಾರಣಾಂತಿಕವಲ್ಲ. ರೋಗಪೀಡಿತ ಪಶುಗಳ ಹಾಲನ್ನು ಕಾಯಿಸಿ ಬಳಸಬಹುದು, ಈ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಪಶು ಸಂಗೋಪನಾ ಸಚಿವ ಎ.ಮಂಜು ಅಭಯ ನೀಡಿದ್ದಾರೆ.
 ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ತಜ್ಞ ವೈದ್ಯರು, ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕ ವರ್ತೂರು ಪ್ರಕಾಶ್ ಮಾಲಕತ್ವದ ಡೇರಿ ಫಾರಂನಲ್ಲಿರುವ ರಾಸುಗಳಲ್ಲಿ ಕಂದುರೋಗ ಕಾಣಿಸಿಕೊಂಡಿದ್ದು, ಸಾಮಾನ್ಯ ಹಸುಗಳಿಂದ ರೋಗಪೀಡಿತ ಹಸುಗಳನ್ನು ಪ್ರತ್ಯೇಕಿಸುವುದೇ ಉತ್ತಮ ಚಿಕಿತ್ಸೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಅಧ್ಯಯನ ವರದಿ: ಕಂದು ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೋಲಾರ ಸೇರಿ ರಾಜ್ಯದಲ್ಲಿ 950 ರಾಸುಗಳ ರಕ್ತಪರೀಕ್ಷೆ ನಡೆಸಿದ್ದು ವರದಿ ನಿರೀಕ್ಷೆಯಲ್ಲಿದ್ದೇವೆ. ‘ಬ್ರುಸೆಲ್ಲಾ’ ರೋಗ ವೈರಸ್‌ನಿಂದ ಹರಡುವುದಿಲ್ಲ. ಬದಲಿಗೆ, ಬ್ಯಾಕ್ಟೀರಿಯಾ ದಿಂದ ರೋಗ ಬಂದಿದ್ದು, ಜಾನುವಾರು ಸಾಕಣೆೆದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.
ಪ್ರಮಾಣ ಪತ್ರ ಕಡ್ಡಾಯ: ಇದು ಸಾಂಕ್ರಾಮಿಕ ರೋಗವಲ್ಲ. ರೋಗಪೀಡಿತ ರಾಸುಗಳನ್ನು ಪ್ರತ್ಯೇಕಿಸಿ ಸಾಕಣೆ ಮಾಡಬೇಕು. ಹೊರ ರಾಜ್ಯಗಳಿಂದ ಪಶುಗಳನ್ನು ಖರೀದಿಸಿ ತರುವವರು ರಾಸುಗಳ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದ ಅವರು, ರಾಜ್ಯಕ್ಕೆ ಬರುವ ಎಲ್ಲ ರಾಸುಗಳನ್ನು ತಪಾಸಣೆ ಮಾಡಲು ಪಶು ವೈದ್ಯರ ತಂಡಗಳನ್ನು ರಚಿಸಲಾಗಿದೆ ಎಂದರು.
ರಾಜ್ಯದಲ್ಲಿನ ಏಳು ತಿಂಗಳ ಒಳಗಿನ ಎಲ್ಲ ಕರುಗಳಿಗೆ ಬ್ರುಸೆಲ್ಲಾ ರೋಗ ತಡೆಗಟ್ಟಲು ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಇದೇನು ಹೊಸ ರೋಗವೇನಲ್ಲ. ಬಹಳ ಹಿಂದಿನಿಂದಲೂ ಕಂದು ರೋಗ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು ಎಂದ ಅವರು, ರೋಗ ಪೀಡಿತ ರಾಸುಗಳ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು.
 ರಾಜ್ಯದಲ್ಲಿನ ಶೇ.1ರಷ್ಟು ದೇಶಿ ಹಾಗೂ ಶೇ.7ರಿಂದ 8ರಷ್ಟು ಸೀಮೆ ಹಸುಗಳಲ್ಲಿ ಕಂದು ರೋಗ ಕಂಡುಬಂದಿದ್ದು, ಸಾಮಾನ್ಯ ಹಸುಗಳಿಂದ ರೋಗಪೀಡಿತ ಹಸುಗಳನ್ನು ಪ್ರತ್ಯೇಕಿಸುವುದೇ ಸೂಕ್ತ ಚಿಕಿತ್ಸೆಯಾಗಿದೆ ಎಂದು ಎ.ಮಂಜು ಇದೇ ವೇಳೆ ಸ್ಪಷ್ಟಣೆ ನೀಡಿದರು.
ಆತಂಕ ಬೇಡ: ಜಾನುವಾರು ಸಾಕಣೆದಾರರು ಹಾಗೂ ರೈತರು ಕಂದು ರೋಗದ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಬೀದರ್, ಕಲಬುರ್ಗಿ, ದಾವಣಗೆರೆ, ಬಳ್ಳಾರಿ, ಸಿರಸಿ ಸೇರಿದಂತೆ ರಾಜ್ಯದ 20 ಪಶು ವೈದ್ಯಕೀಯ ಪ್ರಯೋಗಾಲಯಗಳಲ್ಲಿ ರಾಸುಗಳ ರಕ್ತ ಪರೀಕ್ಷೆ ಮಾಡಿಸಿ ಕಂದುರೋಗದ ಬಗ್ಗೆ ಖಚಿತಪಡಿಸಿಕೊಳ್ಳಬಹುದು ಎಂದರು.
ಕಾಲುಬಾಯಿ ರೋಗಕ್ಕೆ ರಾಜ್ಯದಲ್ಲಿನ 1.30 ಕೋಟಿ ಜಾನುವಾರುಗಳಿಗೆ 11ನೆ ಸುತ್ತಿನ ಲಸಿಕೆ ಹಾಕಲಾಗುತ್ತಿದೆ ಎಂದ ಅವರು, ಕಂದು ರೋಗಪೀಡಿತ ರಾಸುಗಳಿಗೆ ದಯಾಮರಣಕ್ಕೆ ಅವಕಾಶ ನೀಡಿಲ್ಲ. ಅವುಗಳನ್ನು ಸಾಕಾಣಿಕೆ ಮಾಡಬೇಕು ಎಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News