×
Ad

ಕಾವೇರಿ ವಿವಾದ: 12ರಂದು ಸುಪ್ರೀಂಗೆ ಅರ್ಜಿ ಸಲ್ಲಿಕೆ

Update: 2016-09-08 23:43 IST

ಬೆಂಗಳೂರು, ಸೆ.8: ತಮಿಳುನಾಡಿಗೆ 10 ದಿನಗಳ ಕಾಲ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಸೆ.5ರಂದು ನೀಡಿರುವ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಸೆ.12ರಂದು ಸುಪ್ರೀಂಕೋರ್ಟ್‌ಗೆ ರಾಜ್ಯ ಸರಕಾರ ಅರ್ಜಿ ಸಲ್ಲಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಸಂಕಷ್ಟದ ಪರಿಸ್ಥಿತಿಯ ಕುರಿತು ಕೇಂದ್ರ ಮೇಲುಸ್ತುವಾರಿ ಸಮಿತಿಗೆ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಈಗಾಗಲೇ ಪತ್ರ ಬರೆದಿದ್ದಾರೆ ಎಂದರು.

ಅದೇ ರೀತಿ ನಾವು ಮೇಲುಸ್ತುವಾರಿ ಸಮಿತಿ ಎದುರು ನಮ್ಮ ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹ, ಮಳೆಯ ಕೊರತೆ, ಕುಡಿಯುವ ನೀರಿಗೆ ಇರುವ ಸಂಕಷ್ಟ ಸೇರಿದಂತೆ ಎಲ್ಲ ವಿಚಾರಗಳನ್ನು ಮಂಡನೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ಪರ ವಕೀಲರ ತಂಡದ ಮುಖ್ಯಸ್ಥ ಫಾಲಿ ಎಸ್. ನಾರಿಮನ್ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ಸ್ ನೀರನ್ನು ಆರು ದಿನಗಳ ಮಟ್ಟಿಗೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಸುಪ್ರೀಂಕೋರ್ಟ್ 15 ಸಾವಿರ ಕ್ಯೂಸೆಕ್ಸ್ ನೀರನ್ನು 10 ದಿನಗಳವರೆಗೆ ಬಿಡುಗಡೆ ಮಾಡುವಂತೆ ಆದೇಶಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಸುಪ್ರೀಂ ಕೋರ್ಟ್ ನೀಡಿರುವ ಆದೇಶದಷ್ಟು ಪ್ರಮಾಣದ ನೀರು ಬಿಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂಬುದನ್ನು ಮತ್ತೊಮ್ಮೆ ನ್ಯಾಯಾಲಯ ಹಾಗೂ ಮೇಲುಸ್ತುವಾರಿ ಸಮಿತಿಗೆ ನಮ್ಮ ವಕೀಲರ ತಂಡ ಮನದಟ್ಟು ಮಾಡಿಕೊಡಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News