ನನ್ನ ಗೈರಿನಿಂದ ಬಿಜೆಪಿಗೆ ಅಧ್ಯಕ್ಷತೆ ತಪ್ಪಿದ್ದು ನೋವಾಗಿದೆ: ಸಂಸದ ಪ್ರತಾಪ್ ಸಿಂಹ
ಮಡಿಕೇರಿ ಸೆ.10: ನನ್ನ ಸಂದಿಗ್ಧತೆಯಿಂದಾಗಿ ಬಿಜೆಪಿಯ ಅನಿತ ಪೂವಯ್ಯ ಅವರಿಗೆ ಮಡಿಕೇರಿ ನಗರಸಭೆ ಅಧ್ಯಕ್ಷರಾಗುವ ಅವಕಾಶ ಕೈ ತಪ್ಪಿ ಹೋದ ಕುರಿತು ನೋವಿದೆ. ನನ್ನ ಗೈರು ಹಾಜರಿಗೆ ಅಪಾರ್ಥ ಕಲ್ಪಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಸಂಬಂಧ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸಂದೇಶಗಳಿಗೆ ಪ್ರತಿಕ್ರಿಯಿಸಿರುವ ಸಂಸದರು, ಪೂರ್ವನಿಗದಿತ ಕಾರ್ಯಕ್ರಮಗಳಿದ್ದ ಕಾರಣ ಅನಿವಾರ್ಯವಾಗಿ ಮಡಿಕೇರಿ ನಗರಸಭೆೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಕೊಡಗಿಗೆ ರೈಲ್ವೆ ಮಾರ್ಗ ಯೋಜನೆಯ ರೂಪುರೇಷೆ ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ್ದಾಗಿದ್ದ ರೈಲ್ವೆ ಸಲಹಾ ಸಮಿತಿ ಸಭೆಯಲ್ಲಿ ಸಂಸದನಾಗಿ ಪಾಲ್ಗೊಂಡು ಕೊಡಗಿಗೆ ರೈಲು ಮಾರ್ಗ ಯೋಜನೆ ವಿಳಂಬವಾಗದಂತೆ ಗಮನ ಹರಿಸುವುದು ನನ್ನ ಕರ್ತವ್ಯವಾಗಿತ್ತು. ಹೀಗಾಗಿ ಪೂರ್ವ ನಿಗದಿಯಂತೆ ಸೆ.8 ರಂದು ನಾನು ಹುಬ್ಬಳ್ಳಿಗೆ ತೆರಳಬೇಕಾಯಿತು ಎಂದಿದ್ದಾರೆ.
ಸೆ.9 ರಂದು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರೊಂದಿಗೂ ಪೂರ್ವ ನಿಗದಿತ ಸಭೆಯಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿ ಅದರಲ್ಲಿ ಭಾಗವಹಿಸುವುದು ಅನಿವಾರ್ಯವಾಗಿತ್ತು ಎಂದು ಪ್ರತಾಪ ಸಿಂಹ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ನಗರಸಬೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂಬಂಧಿತ ಮಾಹಿತಿ ಮತ್ತು ನನ್ನ ಓಟಿನ ಅನಿವಾರ್ಯತೆಯ ವಿಚಾರ ನನಗೆ ಮೊದಲೇ ಸಿಗದಿದ್ದ ಕಾರಣ ಸಂದಿಗ್ಧ ಸನ್ನಿವೇಶವನ್ನು ನಿರ್ಮಾಣ ಮಾಡಿತ್ತು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಕೊನೆಯ ಹಂತದಲ್ಲಿ ನನಗೆ ಚುನಾವಣೆಗೆ ಬರುವಂತೆ ಕೇಳಿಕೊಂಡರು. ಆದರೆ, ಅದಾಗಲೇ ಪೂರ್ವ ನಿಗದಿತ ಕಾರ್ಯಕ್ರಮ, ರಾಜ್ಯ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಹಿನ್ನೆಲೆೆಯಲ್ಲಿ ಚುನಾವಣೆಗೆ ಬರಲು ಸಾಧ್ಯವಾಗಲಿಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.