ಕೊಡಗಿನಲ್ಲಿ ಪ್ರವಾಸೋದ್ಯಮಕೆ ವಿಪುಲ ಅವಕಾಶ: ಪ್ರೋ. ಕೋಡೀರ ಲೋಕೇಶ್
ಮಡಿಕೇರಿ, ಸೆ.10 : ಕೊಡಗು ವಿಶಾಲ ಕರ್ನಾಟಕದೊಂದಿಗೆ ವಿಲೀನಗೊಂಡ ನಂತರ ಎಲ್ಲಾ ಕ್ಷೇತ್ರಗಳಲ್ಲೂ ಸಾಕಷ್ಟು ಪ್ರಗತಿಯನ್ನು ಕಾಣಲು ಸಾಧ್ಯವಾಗಿದೆ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೋ. ಕೋಡೀರ ಲೋಕೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕೊಡವ ವಿದ್ಯಾನಿಧಿಯ 100ನೆ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕೊಡಗು ವಿಶಾಲ ಕರ್ನಾಟಕದೊಂದಿಗೆ ವಿಲೀನಗೊಂಡ ನಂತರ ಬ್ರಿಟೀಷರ ಆಳ್ವಿಕೆಯಲ್ಲಿ ಕಾಣದ ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆ ಕೊಡಗಿನಲ್ಲಿ ಆಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಯನ್ನು ಸಾಧಿಸುತ್ತಿದ್ದು, ಇದಕ್ಕೆ ವಿಪುಲ ಅವಕಾಶಗಳಿವೆ. ಇಂತಹ ಅವಕಾಶಗಳನ್ನು ಸ್ಥಳೀಯರು ಬಳಸಿಕೊಂಡು ಆರ್ಥಿಕ ಪ್ರಗತಿಯನ್ನು ಕಂಡುಕೊಳ್ಳುವಂತಾಗಬೇಕು.
ಕೊಡಗಿನಲ್ಲಿ ಪರಿಸರ ಮತ್ತು ಅಭಿವೃದ್ಧಿಯನ್ನು ಹೇಗೆ ಸರಿದೂಗಿಸಿಕೊಂಡು ಹೋಗಬೇಕೆನ್ನುವುದು ಅತ್ಯಂತ ಪ್ರಮುಖವಾಗಿದೆ. ಈ ಬಗ್ಗೆ ಸಾಕಷ್ಟು ಚಿಂತನೆಗಳು ನಡೆಯುವ ಅಗತ್ಯವಿದೆಯೆಂದು ಕೋಡೀರ ಲೋಕೇಶ್ ಅಭಿಪ್ರಾಯಪಟ್ಟರು. ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಕೊಡಗು ರಾಜ್ಯದಲ್ಲೇ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದು, ಇಲ್ಲಿನ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಮತ್ತಷ್ಟು ಅಭಿವೃದ್ಧಿಯನ್ನು ಕಾಣುವ ಅಗತ್ಯವಿದೆ ಎಂದರು. ಗ್ರಾಮೀಣ ಭಾಗಗಳಲ್ಲಿ ನಡೆಸುತ್ತಿರುವ ಜನ ಸಂಪರ್ಕ ಸಭೆಗಳಿಂದ ಅಭಿವೃದ್ಧಿಯ ನಡುವೆಯೂ ಸಾಕಷ್ಟು ಸಮಸ್ಯೆಗಳಿರುವುದನ್ನು ಮನಗಂಡಿರುವುದಾಗಿ ಹೇಳಿದರು. ಶಾಂತಿ ಪ್ರಿಯವಾದ ಕೊಡಗಿನಲ್ಲಿ ಕಳೆದ ಕೆಲ ಸಮಯಗಳಿಂದ ಕಾನೂನು ಸುವ್ಯವಸ್ಥೆಗಳಿಗಾಗಿ ಶ್ರಮಿಸುವ ಪರಿಸ್ಥಿತಿ ಎದುರಾಗಿರುವುದನ್ನು ಸೂಕ್ಷ್ಮವಾಗಿ ತಿಳಿಸಿದ ಜಿಲ್ಲಾಧಿಕಾರಿಗಳು ಶಾಂತಿ ಸುವ್ಯವಸ್ಥೆಗೆ ಎಲ್ಲರೂ ಕೈಜೋಡಿಸಬೇಕೆಂದರು.
ಕೊಡವ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಮಾತನಾಡಿ, ಭಾಷೆ ಎನ್ನುವುದು ಸಂಸ್ಕೃತಿಯನ್ನು ಹೊತ್ತೊಯ್ಯುವ ವಾಹನವಾಗಿದೆ. ಈ ಹಿನ್ನೆಲೆಯಲ್ಲಿ ಅವನತಿಯ ಅಂಚಿನಲ್ಲಿರುವ ಕೊಡವ ಭಾಷೆಯನ್ನು ಉಳಿಸುವ ಮೂಲಕ ವಿಶಿಷ್ಟ ಕೊಡವ ಜನಾಂಗವನ್ನು ಸಂರಕ್ಷಿಸಬೇಕಾಗಿದ್ದು, ಇದರ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಪುರಸ್ಕರಿಸಿ ಗೌರವಿಸಲಾಯಿತು.ಇದಕ್ಕೂ ಮೊದಲು ವಿದ್ಯಾನಿಧಿಯ ಮಹಾ ಸಭೆ ನಡೆಯಿತು.
ಕಾರ್ಯಕ್ರಮದ ಅಧಕ್ಷತೆಯನ್ನು ಕೊಡವ ವಿದ್ಯಾನಿಧಿಯ ಅಧ್ಯಕ್ಷ ಕೂತಂಡ ಪಿ. ಉತ್ತಪ್ಪ ವಹಿಸಿದ್ದರು. ಉಪಾಧ್ಯಕ್ಷ ಕೊಂಗಾಂಡ ಎಸ್. ದೇವಯ್ಯ, ಖಜಾಂಚಿ ಕೀತಿಯಂಡ ತಿಮ್ಮಯ್ಯ, ಕಾರ್ಯದರ್ಶಿ ಮೇದೂರ ಪಿ.ಕಾವೇರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.