ಮಹಿಳಾ ರಕ್ಷಣೆಗೆ ‘ಕೆಳದಿ ಚೆನ್ನಮ್ಮ ಪಡೆ’ ರಚನೆ
ಸಾಗರ, ಸೆ.10: ಮಹಿಳಾ ರಕ್ಷಣೆಗೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕೆಳದಿ ಚೆನ್ನಮ್ಮ ಪಡೆಯನ್ನು ರಚಿಸಲಾಗಿದ್ದು, ಈ ಪಡೆಯು ಮಹಿಳೆಯರು ಸಮಸ್ಯೆಗಳಿಗೆ ಸಿಲುಕಿದಾಗ ಅವರಿಗೆ ನ್ಯಾಯ ಕಲ್ಪಿಸುವ ಕೆಲಸವನ್ನು ಮಾಡುತ್ತದೆ ಎಂದು ಎಎಸ್ಪಿ ನಿಶಾ ಜೇಮ್ಸ್ ಹೇಳಿದರು.
ಇಲ್ಲಿನ ಶ್ರೀಮತಿ ಇಂದಿರಾಗಾಂಧಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಹಾಗೂ ಎನ್ನೆಸ್ಸೆಸ್ ಘಟಕದ ವತಿಯಿಂದ ಶನಿವಾರ ಕೆಳದಿ ಚೆನ್ನಮ್ಮ ಪಡೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಬದಲಾದ ದಿನಮಾನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡದ ಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರತಿಯೊಂದು ಕೆಲಸ ಮಾಡುವಾಗಲೂ ಮಹಿಳೆಯರು ಮತ್ತೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಮಹಿಳೆಯರ ಅವಲಂಬನೆಯನ್ನು ಕೆಲವರು ದುರುಪಯೋಗಪಡಿಸಿಕೊಂಡು ದೌರ್ಜನ್ಯಕ್ಕೆ ಮುಂದಾಗುತ್ತಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದಿದೆ ಎಂದರು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಹಾಗೂ ನೊಂದ ಮಹಿಳೆಯರಿಗೆ ಸಾಂತ್ವನ ಹೇಳಲು ಇಂತಹ ಪಡೆಯ ಅಗತ್ಯವಿದೆ. ಕೆಲವು ಸಂದರ್ಭದಲ್ಲಿ ಮಾನ ಮರ್ಯಾದೆಗೆ ಅಂಜಿ ತಮ್ಮ ಮೇಲೆ ದೌರ್ಜನ್ಯ ನಡೆದರೂ ಠಾಣೆಗೆ ಬಂದು ದೂರು ನೀಡಲು ಹಿಂಜರಿಯುತ್ತಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಕಾಲೇಜು, ಪಿಯು ಕಾಲೇಜು, ಸರಕಾರಿ ಬಸ್ ನಿಲ್ದಾಣ ಇನ್ನಿತರ ಕಡೆಗಳಲ್ಲಿ ದೂರು ಪೆಟ್ಟಿಗೆ ಇಡಲಾಗುತ್ತದೆ. ಹೆಣ್ಣುಮಕ್ಕಳಿಗೆ ಚುಡಾಯಿಸಿದರೆ, ತೊಂದರೆ ಕೊಟ್ಟರೆ ಅವರ ಬಗ್ಗೆ ದೂರುಗಳನ್ನು ಪೆಟ್ಟಿಗೆಯಲ್ಲಿ ಹಾಕಬಹುದು. ದೂರು ಕೊಟ್ಟವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುತ್ತದೆ ಎಂದರು. ಎಪಿಎಂಸಿ ಕಾರ್ಯದರ್ಶಿ ಶೈಲಜಾ ಮಾತನಾಡಿ, ಹೆಣ್ಣುಮಕ್ಕಳ ಮೇಲಿನ ಶೋಷಣೆ ನಡೆಯುತ್ತಿದೆ. ಬದಲಾದ ದಿನಮಾನಗಳಲ್ಲಿ ಸಂವಿಧಾನದಲ್ಲಿಯೇ ಮಹಿಳಾ ರಕ್ಷಣೆ ಬಗ್ಗೆ ಸೂಕ್ತ ಕಾಯ್ದೆ ಕಾನೂನು ಇದ್ದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರನ್ನು ಸ್ಥಳೀಯವಾಗಿ ರಕ್ಷಣೆ ಮಾಡಲು ಇಂತಹ ಪಡೆಗಳ ಅಗತ್ಯ ಹೆಚ್ಚು ಇದೆ ಎಂದು ತಿಳಿಸಿದರು. ಪ್ರಾಚಾರ್ಯ ಪ್ರೊ. ಉಮೇಶ್ ಪಿ., ಉಪನ್ಯಾಸಕಿ ನಿತಿಶ್ರೀ, ಸರ್ಕಲ್ ಇನ್‌ಸ್ಪೆಕ್ಟರ್ ಜನಾರ್ದನ್ ಬಿ.ಎಲ್., ಪ್ರಾಧ್ಯಾಪಕ ಉಮಾಪತಿ ಮತ್ತಿತರರಿದ್ದರು.