ಧನ ದಾಹದಿಂದ ಮಾನವೀಯ ವೌಲ್ಯ ಕುಸಿತ: ದೇವರಾಜ್
ಚಿಕ್ಕಮಗಳೂರು, ಸೆ.10: ಮನುಷ್ಯ ಹಣದ ಹಿಂದೆ ಓಡಲಾರಂಭಿಸಿದ್ದು, ಮಾನವೀಯ ವೌಲ್ಯಗಳು ಕುಸಿದು ವೃದ್ಧಾಶ್ರಮ, ಅನಾಥಾಶ್ರಮಗಳ ಸಂಖ್ಯೆ ಅಧಿಕವಾಗಿದೆ ಎಂದು ನಗರಸಭಾಧ್ಯಕ್ಷ ದೇವರಾಜ್ ಶೆಟ್ಟಿ ವಿಷಾಧಿಸಿದ್ದಾರೆ.
ಇಲ್ಲಿನ ರಾಮೇಶ್ವರ ನಗರ ಬಡಾವಣೆಯಲ್ಲಿ ರಾಮೇಶ್ವರ ನಗರ ಹಿತರಕ್ಷಣಾ ಸಮಿತಿ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಪ್ರತಿಷ್ಠಾಪಿಸಿರುವ 13ನೆ ವರ್ಷದ ಗಣೇಶೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತಮ ವಿದ್ಯಾಭ್ಯಾಸದ ಜೊತೆಗೆ ಒಳ್ಳೆಯ ಸಂಸ್ಕಾರವನ್ನ್ನು ಹೊಂದುವುದು ಅಗತ್ಯ. ಹೆಚ್ಚಿನ ಶಿಕ್ಷಣ ಪಡೆದವರು ಉದ್ಯೋಗ ಅರಸಿ ಬೇರೆ ಊರುಗಳಿಗೆ ಹೋಗುವುದು ಅನಿವಾರ್ಯ. ಅಂದ ಮಾತ್ರಕ್ಕೆ ತಮ್ಮನ್ನು ಸಾಕಿದವರನ್ನು, ಸಮಾಜವನ್ನು ಮರೆಯುವುದು ಸರಿಯಲ್ಲ. ಹಣದ ಹಿಂದೆ ಬಿದ್ದಿರುವುದರಿಂದ ನೆಮ್ಮದಿ ನಾಶವಾಗಿದೆ ಎಂದು ತಿಳಿಸಿದರು.
ಬ್ರಿಟಿಷರ ವಿರುದ್ಧ ಸಂಘಟಿತ ಹೋರಾಟ ನಡೆಸುವ ಸಾಧನವಾಗಿ ಗಣೇಶ ಉತ್ಸವವನ್ನು ಆರಂಭಿಸಿದೆ. ನಿರ್ದಿಷ್ಟ ಉದ್ದೇಶ ಸಾಧಿಸುವಲ್ಲಿ ಇದು ಯಶಸ್ವಿಯಾಯಿತಲ್ಲದೆ ಎಲ್ಲರನ್ನು ಬೆಸೆಯುವ ಸಾಧನವಾಯಿತು. ಸಾಮರಸ್ಯದ ಬದುಕಿನ ಮೂಲಕ ಸಂಬಂಧಗಳು ಗಟ್ಟಿಯಾಗಬೇಕು, ಪ್ರೀತಿ ವಿಶ್ವಾಸದಿಂದ ಜೀವನ ನಡೆಸಬೇಕು. ರಾಮೇಶ್ವರ ನಗರ ಬಡಾವಣೆಗೆ ತಮ್ಮ ಅವಧಿಯಲ್ಲಿ ಸಾಕಷ್ಟು ಕೆಲಸಗಳು ನಡೆದಿದ್ದು, ಮುಂದಿನ ದಿನಗಳಲ್ಲಿಯೂ ಇಲ್ಲಿನ ಜನರ ಜೊತೆಗೆ ಇರುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ 7 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇಂದು ಮಧ್ಯಾಹ್ನ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಬಣ್ಣಬಣ್ಣದ ಚಿತ್ತಾರ ಬಿಡಿಸಿ ಗಮನ ಸೆಳೆದರು.
ಸಂಘದ ಕಾರ್ಯದರ್ಶಿ ಆನಂದರಾಜ್ ಅರಸ್ ಸ್ವಾಗತಿಸಿ, ಸಹ ಕಾರ್ಯದರ್ಶಿ ಸಂತೋಷ್ ಜೈನ್ ವಂದಿಸಿದರು. ಖಜಾಂಚಿ ದಿನೇಶ ಪಟವರ್ಧನ್, ಸ್ಥಾಪಕಾಧ್ಯಕ್ಷ ಕರುಣಾಕರ ಹೆಗ್ಡೆ ಮಾತನಾಡಿದರು. ಅಧ್ಯಕ್ಷ ಗಿರೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಯು.ಟಿ.ನಾಗರಾಜ್, ಮಹಾದೇವಿ ನಿಲಗುಂದ ಉಪಸ್ಥಿತರಿದ್ದರು.