ಸರಕಾರದಿಂದ ಸರಕಾರಿ ಶಾಲೆಗಳ ಖಾಸಗೀಕರಣ ಸಲ್ಲದು: ಶಾಸಕ ದತ್ತ

Update: 2016-09-10 16:55 GMT

ಕಡೂರು, ಸೆ.10: ಸರಕಾರ ಒಂದು ಕಡೆ ಕನ್ನಡ ಶಾಲೆಗಳನ್ನು ಉಳಿಸಿ ಎಂದು ಹೇಳುತ್ತದೆ. ಇನ್ನೊಂದು ಕಡೆ ಆರ್‌ಟಿಇ ಯೋಜನೆಯಡಿ ಸರಕಾರಿ ಶಾಲೆಯ ಪ್ರತೀ ಐದು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವುದರ ಮೂಲಕ ಖಾಸಗಿ ಶಾಲೆಗಳಿಗೆ ಉತ್ತೇಜನ ನೀಡುತ್ತಿದೆ. ಈ ಪದ್ಧತಿಯನ್ನು ಸರಕಾರ ತಿರಸ್ಕರಿಸಬೇಕಿದೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.

ಅವರು ಶನಿವಾರ ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿಯ ವತಿಯಿಂದ ಗಣಪತಿ ಪೆಂಡಾಲ್ ಆವರಣದಲ್ಲಿ ಡಾ. ಎಸ್. ರಾಧಾಕೃಷ್ಣನ್‌ರ ಜನ್ಮದಿನೋತ್ಸವದ ಅಂಗವಾಗಿ 55ನೆ ಶಿಕ್ಷಕರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ಆರ್‌ಟಿಇ ಯೋಜನೆಯಡಿ ಪ್ರತಿ ಮಗುವಿಗೆ ಖಾಸಗಿ ಶಾಲೆಗೆ 25,000 ರೂ. ನೀಡುತ್ತಾ ಈ ಯೋಜನೆಗಾಗಿ 2,400 ಕೋಟಿ ರೂ.ವ್ಯಯ ಮಾಡುತ್ತಿದೆ. ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದರೂ ರಾಜ್ಯ ಸರಕಾರವೇ ಪೂರ್ಣ ಹಣ ಭರಿಸಬೇಕಿದೆ. ಹಲವಾರು ರಾಜ್ಯಗಳು ಈ ಯೋಜನೆಯನ್ನು ತಿರಸ್ಕರಿಸಿವೆ. ನಮ್ಮ ರಾಜ್ಯ ಸರಕಾರವು ಈ ಯೋಜನೆಯನ್ನು ತೆಗೆದು ತಿರಸ್ಕರಿಸಬೇಕಿದೆ ಎಂದು ತಿಳಿಸಿದರು. ಸಾಹಿತಿ ಡಾ. ಶ್ರೀಕಂಠಕೂಡಿಗಿ ಉಪನ್ಯಾಸ ನೀಡಿ ಮಾತನಾಡಿ, ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರ ಜೊತೆಗೆ ಜಾತಿ ಭಾವನೆಗಳು ಹೆಚ್ಚಾಗಿವೆ. ಉನ್ನತ ಶಿಕ್ಷಣ ಪಡೆದವರೇ ಹೆಚ್ಚು ಹೆಚ್ಚು ಜಾತಿವಾದಿಗಳು, ಭಯೋತ್ಪಾದಕರಾಗುತ್ತಿದ್ದಾರೆ. ಶಿಸ್ತು ಶಿಕ್ಷಣದ ಒಂದು ಅಂಗ. ಶಿಕ್ಷಕನಾದವನಿಗೆ ರಾಜಕಾರಣ ಇರಬಾರದು, ದೇಶದ ಪ್ರಥಮ ಶತ್ರು ಎಂದರೆ ರಾಜಕಾರಣಿಗಳು, ಉನ್ನತ ಮಟ್ಟದ ಅಧಿಕಾರಿಗಳೇ ದೇಶದ್ರೋಹಿಗಳು. ಇವರುಗಳಿಂದ ಈ ದೇಶಕ್ಕೆ ಭವಿಷ್ಯವಿಲ್ಲ ಎಂದು ತಿಳಿಸಿದರು.

 ಜಿಪಂ ಸದಸ್ಯ ಕೆ.ಆರ್. ಮಹೇಶ್ ಒಡೆಯರ್ ಮಾತನಾಡಿ, ಸಮಾಜವನ್ನು ತಿದ್ದಿ ಬೆಳೆಸುವವರು, ಜೀವನ ಶೈಲಿಯನ್ನು ಬದಲಿಸುವವರು ಶಿಕ್ಷಕರು. ಶಿಕ್ಷಣದ ನೀತಿಗಳು, ಧೋರಣೆಗಳನ್ನು ನೋಡಿದರೆ ಶಿಕ್ಷಕರನ್ನು ನೋವಿಗೆ ಗುರಿ ಮಾಡುತ್ತದೆ. ಸರಕಾರವೇ ಶಿಕ್ಷಕರ ದಿನಾಚರಣೆಯನ್ನು ಆಚರಿಸುವಂತಾಗಬೇಕಿದೆ. ಶಿಕ್ಷಕರೇ ಹಣ ಭರಿಸಿಕೊಂಡು ಸಭೆೆ ನಡೆಸುವುದು ವಿಷಾದನೀಯ. ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೀತಿಯಿಂದ ಸರಕಾರವೇ ದಾರಿ ತಪ್ಪಿಸುತ್ತಿದೆ. ಸರಕಾರದ ಹಲವಾರು ಕಾರ್ಯಕ್ರಮಗಳ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡಿದರೆ ಅವರು ಮಕ್ಕಳಿಗೆ ಪಾಠ ಮಾಡುವುದು ಯಾವಾಗ ಎಂಬಂತಾಗಿದೆ ಎಂದು ತಿಳಿಸಿದರು. ಪ್ರಾಸ್ತಾವಿಕವಾಗಿ ಶಿಕ್ಷಣಾಧಿಕಾರಿ ಶ್ರೀಕಂಠೇಶ್ವರ್ ಮಾತನಾಡಿದರು. ತಾಪಂ ಅಧ್ಯಕ್ಷೆ ರೇಣುಕಾ ಉಮೇಶ್ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಜಿಪಂ ಸದಸ್ಯರಾದ ಶರತ್ ಕೃಷ್ಣಮೂರ್ತಿ, ಕಾವೇರಿ ಲಕ್ಕಪ್ಪ, ಲೋಲಾಕ್ಷಿಬಾಯಿ, ತಾಪಂ ಉಪಾಧ್ಯಕ್ಷ ರುದ್ರಮೂರ್ತಿ, ಪುರಸಭೆ ಅಧ್ಯಕ್ಷೆ ಅನಿತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಂಜುನಾಥ್, ಡಿ. ಉಮೇಶ್, ಸರಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಮಂಜುನಾಥ್, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆನಂದಮೂರ್ತಿ ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News