ಮೃತರ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರ ವಿತರಣೆ
ಶಿವಮೊಗ್ಗ, ಸೆ. 10: ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ತುಂಗಾಭದ್ರಾ ನದಿಯಲ್ಲಿ ಗಣಪತಿ ವಿಸರ್ಜನೆಗೆ ತೆರಳಿದ್ದ ವೇಳೆ ತೆಪ್ಪಮುಳುಗಿ 12 ಜನ ಅಸುನೀಗಿದ್ದ ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ರಾಜ್ಯ ಸರಕಾರ ತಲಾ 1 ಲಕ್ಷ ರೂ. ಪರಿಹಾರ ಧನ ಬಿಡುಗಡೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪಅವರು ಶನಿವಾರ ಹಾಡೋನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಬಳಿಕ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ಧನದ ಚೆಕ್‌ನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಉಸ್ತವಾರಿ ಸಚಿವ ಕಾಗೋಡು ತಿಮ್ಮಪ್ಪ, ಈ ಭಾಗದಲ್ಲಿ ತೂಗು ಸೇತುವೆ ನಿರ್ಮಾಣ ಮಾಡಬೇಕೆಂಬ ಬಹುದಿನದ ಬೇಡಿಕೆ ಇದೆ. ಸಂಬಮಧ ಪಟ್ಟ ಅಧಿಕಾರಿಗಳು ಪ್ರಾಸ್ತವನೆ ಕಳುಹಿಸಿದರೆ ಸರಕಾರದದೊಂದಿಗೆ ಚರ್ಚಿಸಿ ಸೇತುವೆ ನಿರ್ಮಾಣದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಲ್ಲದೆ, ಹೊಳಲೂರು ಬಳಿ ತುಂಗಾಭದ್ರಾ ನದಿಗೆ ನಿರ್ಮಿಸಲಾಗಿರುವ ಸೇತುವೆ ಕಾಮಗಾರಿ ಪೂರ್ಣಗೊಂಡರೂ ಸಂಪರ್ಕ ರಸ್ತೆ ಇಲ್ಲ.ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದುರಂತದ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೃತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ತಲಾ 1 ಲಕ್ಷ ರೂ. ಪರಿಹಾರವನ್ನು ಮಂಜೂರು ಮಾಡಿದ್ದಾರೆ. ಸರಕಾರದ ಪರವಾಗಿ ಪರಿಹಾರ ಧನದ ಚೆಕ್‌ಗಳನ್ನು ವಿತರಣೆ ಮಾಡಲಾಗಿದೆ. ಈ ಸಂಬಂಧ ಹೆಚ್ಚಿನ ಪರಿಹಾರ ನೀಡುವಂತೆ ಬೇಡಿಕೆ ಬಂದಿದೆ. ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಶಾರದಾ ಪೂರ್ಯಾನಾಯಕ್, ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಸೂಡಾಧ್ಯಕ್ಷ ಎನ್. ರಮೇಶ್, ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಸಿಇಒ ರಾಕೇಶ್‌ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಅಧಿಕಾರಿಗಳು ಮತ್ತು ಹಾಡೋನಹಳ್ಳಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಕಣ್ಣೀರಧಾರೆ: ಸಚಿವರು ಪರಿಹಾರ ಧನದ ಚೆಕ್ ಹಸ್ತಾಂತರಿಸುವ ವೇಳೆ ಮೃತರ ಕುಟುಂಬ ಸದಸ್ಯರು ಕಣ್ಣೀರು ಸುರಿಸುತ್ತಲೇ ಚೆಕ್ ಪಡೆಯುತ್ತಿದ್ದ ದೃಶ್ಯ ಕಂಡು ಬಂದಿತು. ದುಃಖದಲ್ಲಿದ್ದ ಕುಟುಂಬಗಳಿಗೆ ಸಚಿವರು ಸಾಂತ್ವನ ಹೇಳಿದರು.
ಸುಪ್ರೀಂ ಕೋರ್ಟ್ ತೀರ್ಪು ಪಾಲನೆ ಅನಿವಾರ್ಯ: ಸಚಿವ ಕಾಗೋಡು
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಪಾಲನೆ ಮಾಡುವುದು ರಾಜ್ಯಕ್ಕೆ ಅನಿವಾರ್ಯವಾಗಿದೆ ಎಂದು ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪತಿಳಿಸಿದ್ದಾರೆ. ತಾಲೂಕಿನ ಹಾಡೋನಹಳ್ಳಿ ಗ್ರಾಮದಲ್ಲಿ ತೆಪ್ಪ ದುರಂತದ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಮೇಲುಸ್ತುವಾರಿ ಸಮಿತಿಯನ್ನು ರಚಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಸಚಿವ ಸಂಪುಟದಲ್ಲಿ ಮತ್ತು ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾವುದು ಎಂದರು. ಕಾವೇರಿ ನೀರಿಗೆ ಸಂಬಂಧಿಸಿದಂತೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು. ವಸ್ತು ಸ್ಥಿತಿ ತಿಳಿಸಲಾಗುವುದು. ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಸರಕಾರ ಬದ್ಧವಾಗಿದೆ ಎಂದರು. ಈ ಹಿಂದೆ ದಿವಂಗತ ಎಸ್. ಬಂಗಾರಪ್ಪಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಉದ್ಭವವಾಗಿದ್ದ ಕಾವೇರಿ ವಿವಾದಕ್ಕೆ ಸಂಬಂಧಿಸಿಂತೆ ಸುಗ್ರೀವಾಜ್ಞೆ ಹೊರಡಿಸಿ ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಮುಂದಾಗಿದ್ದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲ ಸಂದರ್ಭಗಳು ಹಾಗೆಯೇ ಇರುವುದಿಲ್ಲ. ಇದು 2 ರಾಜ್ಯಗಳ ನಡುವಿನ ಸಮಸ್ಯೆ. ಕಾನೂನು ಚೌಕಟ್ಟು ಮತ್ತು ಮಾತುಕತೆ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೇಂದ್ರ ಸರಕಾರದ ಸಹಕಾರವೂ ಅಗತ್ಯವಾಗಿ ಬೇಕಾಗಿದೆ ಎಂದು ಅವರು ಹೇಳಿದರು.
ಬದಲಾವಣೆ ಏಕೆ: ಕರ್ನಾಟಕ ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿರುವ ನ್ಯಾಯವಾದಿ ನಾರಿಮನ್ ಅವರು ಅನುಭವಿ, ಹಿರಿಯ ವಕೀಲರು. ಗೆದ್ದಾಗ ಮೆಚ್ಚುಗೆ, ಸೋತಾಗ ಟೀಕೆಗಳು ಬರುವುದು ಸಹಜ. ಈ ಹಿಂದಿನ ಜೆಡಿಎಸ್, ಬಿಜೆಪಿ ಸರಕಾರಗಳ ಅವಧಿಯಲ್ಲಿಯೂ ಅವರನ್ನೇ ವಕೀಲರನ್ನಾಗಿ ನೇಮಿಸಲಾಗಿತ್ತು. ಈಗ ಬದಲಾವಣೆಗೆ ಆಗ್ರಹಿಸುವುದು ಸರಿಯಲ್ಲ ಎಂದು ನುಡಿದರು.