ಜನಪರ ಆಡಳಿತದಿಂದ ಮಾದರಿ ನಗರ: ಸಚಿವ ಕಾಗೋಡು
ಸಾಗರ, ಸೆ. 10: ಸ್ಥಳೀಯ ಆಡಳಿತ ಜನಪರವಾಗಿ ಕೆಲಸ ಮಾಡಿದರೆ ನಗರ ಮಾದರಿಯಾಗಿ ರೂಪುಗೊಳ್ಳುತ್ತದೆ. ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜನಪ್ರತಿನಿಧಿಗಳು ತಮ್ಮ ಅಧಿಕಾರವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಸಚಿವ ಕಾಗೋಡು ತಿಮ್ಮಪ್ಪಕಿವಿಮಾತು ಹೇಳಿದ್ದಾರೆ. ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಶನಿವಾರ ನಗರಸಭೆ ವತಿಯಿಂದ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ, ಸಮುದಾಯ ಭವನ ಮತ್ತು ನಗರಸಭೆ ಕಚೇರಿಯ ವಿಸ್ತರಣಾ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಗರ ವಿಶಾಲವಾಗಿ ಬೆಳೆಯುತ್ತಿದೆ. ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸುವುದು ಆಡಳಿತದ ಜವಾಬ್ದಾರಿ. ಒಳಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ನಗರವ್ಯಾಪ್ತಿಯಲ್ಲಿ ಕೆಲವು ರಸ್ತೆಗಳು ಹಾಳಾಗಿದ್ದು, ಅದನ್ನು ತುರ್ತು ದುರಸ್ತಿ ಮಾಡುವ ಬಗ್ಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು. ಹೊಸದಾಗಿ ಅಂಗನವಾಡಿ ಕಟ್ಟಡ ಉದ್ಘಾಟಿಸಲಾಗಿದ್ದು, ಅವುಗಳಿಗೆ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ಆಡಳಿತ ಗಮನ ಹರಿಸಬೇಕು. ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಸರಬರಾಜು ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಆರ್. ಗಣಾಧೀಶ್, ಶಿವಪ್ಪನಾಯಕ ನಗರದ ಬೀಡಿ ಕ್ವಾಟ್ರರ್ಸ್, ಚೌಡಿಕಟ್ಟೆ, ಚಂದ್ರಮಾವಿನ ಕೊಪ್ಪಲು ಭಾಗದಲ್ಲಿ ಅಂಗನವಾಡಿ ಕಟ್ಟಡ, ಎಸ್.ಎನ್. ನಗರದ ಎ.ಕೆ. ಕಾಲನಿಯಲ್ಲಿ ಸಮುದಾಯ ಭವನ ಹಾಗೂ ನಗರಸಭೆ ಕಚೇರಿ ವಿಸ್ತರಣಾ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗಿದೆ. ನಗರವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಎಂದರು. ವೇದಿಕೆಯಲ್ಲಿ ಪೌರಾಯುಕ್ತ ಬಿ.ಎನ್. ಚಂದ್ರಶೇಖರ್, ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸದಸ್ಯರಾದ ತೀ.ನ. ಶ್ರೀನಿವಾಸ್, ಮುಹಮ್ಮದ್ ರಫೀಕ್ ಇದಿನಬ್ಬ, ಎಚ್.ಕೆ. ನಾಗಪ್ಪ ಮತ್ತಿತರರು ಉಪಸ್ಥಿತರಿದ್ದರು.