×
Ad

ಸಂಘಟಿತರಾದರೆ ಮಾತ್ರ ದಲಿತ ಮುಖ್ಯಮಂತ್ರಿ ಸಾಧ್ಯ: ಸಚಿವ ರುದ್ರಪ್ಪ ಲಮಾಣಿ

Update: 2016-09-10 22:54 IST

ಬೆಂಗಳೂರು, ಸೆ.10: ಸ್ವಾತಂತ್ರಪೂರ್ವದಿಂದ ಮತ್ತು ನಂತರವೂ ನಾವು ಉಳ್ಳವರ ಕಾಲಿಗೆ ಬೀಳ್ತಾ ಬಂದಿದ್ದೇವೆ. ಈಗ ನಮ್ಮಲ್ಲಿ ವಿದ್ಯಾವಂತ ಜನರಿದ್ದಾರೆ. ಹೀಗಾಗಿ ನಾವು ಸಂಘಟಿತರಾಗಿ, ಎಲ್ಲರೂ ಒಂದಾದರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ದಲಿತರು ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ಸಚಿವ ರುದ್ರಪ್ಪ ಲಮಾಣಿ ಅಭಿಪ್ರಾಯಿಸಿದ್ದಾರೆ. ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ದಲಿತ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜವಾಬ್ದಾರಿ ಯುತವಾಗಿ ಸಮುದಾಯವನ್ನು ನಡೆಸಲು ಸಾಕಷ್ಟು ನ್ಯೂನತೆಗಳಿದ್ದು, ಅವುಗಳನ್ನು ಸರಿಪಡಿಸಿಕೊಂಡು ಮುನ್ನೆಡಯಬೇಕಿದೆ. ಅದಕ್ಕಾಗಿ ಸಮುದಾಯದ ಎಲ್ಲರೂ ಒಂದಾಗಬೇಕು ಎಂದು ಸಲಹೆ ನೀಡಿದರು.

 ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ದಲಿತ ಸಮುದಾಯಕ್ಕೆ ಮಠದ ಸ್ವಾಮಿಗಳು, ಧಾರ್ಮಿಕ ಮುಖಂಡರಿಗಿಂತ ಹೆಚ್ಚಾಗಿ ಬದುಕು ಕೊಟ್ಟ ಡಾ.ಅಂಬೇಡ್ಕರ್ ಮುಖ್ಯ. ಆದರೆ, ಬಹುತೇಕ ಸಮುದಾಯದ ಜನರು ತಮ್ಮ ಜಾತಿಯನ್ನು ಗುರುತಿಸಿಕೊಳ್ಳಲು ಮನೆಗಳಲ್ಲಿ ಮಠದ ಸ್ವಾಮಿಗಳ ಭಾವಚಿತ್ರ ಹಾಕಿಕೊಳ್ಳು ತ್ತಾರೆ. ಆದರೆ, ಬದುಕು ಕೊಟ್ಟಂತಹ ವ್ಯಕ್ತಿಯ ಭಾವಚಿತ್ರವನ್ನು ಯಾರೂ ಹಾಕಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ತನ್ನ ಜೀವನದುದ್ದಕ್ಕೂ ನಿಸ್ವಾರ್ಥಿಯಾಗಿ ಬದುಕಿದರು. ಸಂವಿಧಾನದ ಮೂಲಕ ಎಲ್ಲರೂ ಸಮಾನರು ಎಂಬ ಭಾವನೆ ವ್ಯಕ್ತಪಡಿಸಿದ್ದರು. ಆದರೆ, ನಾವಿಂದು ನಮ್ಮ ಮಧ್ಯೆ ಕಂದಕಗಳನ್ನು ಸೃಷ್ಟಿಸಿಕೊಂಡು ಕಚ್ಚಾಡುತ್ತಿದ್ದೇವೆ. ಹೀಗಾಗಿ ಎಲ್ಲ ದಲಿತರು ಮಠ-ಮಾನ್ಯಗಳನ್ನು, ಧರ್ಮಗುರುಗಳನ್ನು, ನಮ್ಮಲ್ಲಿರುವ ಕೀಳರಿಮೆಯನ್ನು ಹೊರಗಿಟ್ಟು ನಾವೆಲ್ಲರೂ ಸಮಾನರು ಎಂಬ ಭಾವನೆಯಿಂದ ಒಟ್ಟಾಗಬೇಕು ಎಂದು ಕರೆ ನೀಡಿದರು.
  ರಾಜ್ಯದಲ್ಲಿ ಒಕ್ಕಲಿಗ, ವೀರಶೈವ ಸೇರಿದಂತೆ ಇನ್ನಿತರೆ ಕೆಲವು ಜಾತಿಗಳಲ್ಲಿನ ಜನಪ್ರತಿನಿಧಿಗಳು ಮುಕ್ತವಾಗಿ ತಮ್ಮ ಜಾತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ, ದಲಿತ ಜನಪ್ರತಿನಿಧಿಗಳು ಯಾರೂ ಮುಕ್ತವಾಗಿ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಸಾರ್ವಜನಿಕವಾಗಿ ಕಾಣಿಸಿಕೊಂಡರೆ ನಮ್ಮ ಸ್ಥಾನಕ್ಕೆ ಚ್ಯುತಿ ಬರಬಹುದು ಎಂಬ ಕಾರಣಕ್ಕೆ ಹಲವು ಚುನಾಯಿತ ವ್ಯಕ್ತಿಗಳು ಮುಕ್ತವಾಗಿ ಕಾಣಿಸಿಕೊಳ್ಳದೆ, ಭಯದ ವಾತಾವರಣ ದಲ್ಲಿದ್ದಾರೆ. ದಲಿತರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಬೇಕಾಗಿದೆ ಎಂದರು.
ಹಿಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ದಲಿತ ಸಮುದಾಯ ತಮಗೆ ಮೀಸಲಿಟ್ಟಿರುವ ಕೇವಲ 51 ಸ್ಥಾನಗಳ ಬಗ್ಗೆ ಮಾತ್ರ ಯೋಚನೆ ಮಾಡ್ತಾರೆ. ಆದರೆ, ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದಲಿತರು ಮೀಸಲಿ ರಿಸಿದ ಸ್ಥಾನಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಉಳಿದ ಕ್ಷೇತ್ರಗಳ ಕುರಿತು ಯೋಚಿಸಿದರೆ ದಲಿತರು ನಿರ್ಣಾಯಕರಾಗುತ್ತಿದ್ದರು ಎಂದರು.
ಸಭೆಯಲ್ಲಿ ಉನಾ ಮಾದರಿಯಲ್ಲಿ ಸತ್ತ ದನಗಳನ್ನು ಮುಟ್ಟುವುದಿಲ್ಲ, ಕಸ ಹೊರುವುದಿಲ್ಲ, ಸ್ವಾಭಿಮಾನದಿಂದ ಬದುಕುವ ಕೆಲಸ ಮಾಡುತ್ತೇವೆ ಎಂಬ ನಿರ್ಣಯಗಳನ್ನು ಅಂಗೀಕರಿಸಲಾಗುತ್ತಿದೆ ಎಂದು ದಲಿತ ಮುಖಂಡ ಛಲವಾದಿ ಟಿ.ನಾರಾಯಣಸ್ವಾಮಿ ಘೋಷಿಸಿದರು.
  ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಶಾಸಕಿ ರಾಮಕ್ಕ, ಮಾಜಿ ಶಾಸಕ ಸಂಪಂಗಿ, ಸೇವಾಲಾಲ್‌ಸ್ವಾಮೀಜಿ, ಎಲ್.ಎನ್.ಮೂರ್ತಿ, ಹನುಮಂತಪ್ಪ, ಲಯನ್ ಬಾಲಕೃಷ್ಣ ಉಪಸ್ಥಿತರಿದ್ದರು.

ದಲಿತ ಸಮುದಾಯಕ್ಕೆ ಮಠದ ಸ್ವಾಮಿಗಳು, ಧಾರ್ಮಿಕ ಮುಖಂಡರಿ ಗಿಂತ ಹೆಚ್ಚಾಗಿ ಬದುಕು ಕೊಟ್ಟ ಅಂಬೇಡ್ಕರ್ ಮುಖ್ಯ. ಆದರೆ, ಬಹುತೇಕ ಸಮುದಾಯದ ಜನರು ಮನೆ ಗಳಲ್ಲಿ ಮಠದ ಸ್ವಾಮಿಗಳ ಭಾವಚಿತ್ರ ಹಾಕಿಕೊಳ್ಳುತ್ತಾರೆ. ಅಂಬೇಡ್ಕರ್ ಭಾವಚಿತ್ರವನ್ನು ಯಾರೂ ಹಾಕಿಕೊಳ್ಳುತ್ತಿಲ್ಲ. ದಲಿತರು ಮಠ- ಮಾನ್ಯಗಳನ್ನು, ಕೀಳರಿಮೆಯನ್ನು ಹೊರಗಿಟ್ಟು ಒಟ್ಟಾಗಬೇಕಿದೆ.
ಮಾದಾರ ಚನ್ನಯ್ಯ ಸ್ವಾಮೀಜಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News