ಕಡಿಮೆ ನೀರು, ಅಧಿಕ ಇಳುವರಿಯ ತಳಿ ಪರಿಚಯಕ್ಕೆ ಚಿಂತನೆ
ಬೆಂಗಳೂರು, ಸೆ.10: ರೋಗ ನಿರೋಧಕ ಶಕ್ತಿಯೊಂದಿಗೆ ಕಡಿಮೆ ನೀರಾವರಿಯಲ್ಲಿ ಅಧಿಕ ಇಳುವರಿ ನೀಡುವ ರಾಗಿ ಮತ್ತು ಜೋಳದ ತಳಿಗಳನ್ನು ಮುಂದಿನ ವರ್ಷ ರೈತರಿಗೆ ಪರಿಚಯಿಸ ಲಾಗುವುದು ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಶನಿವಾರ ನಗರದ ಕಬ್ಬನ್ ಉದ್ಯಾನವನದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಜೈವಿಕ್ ಕೃಷಿಕ್ ಸೊಸೈಟಿ ಇಂದಿನಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸಾವಯವ ಹಾಗೂ ಸಿರಿಧಾನ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬರಗಾಲದಲ್ಲಿಯೂ ಅಧಿಕ ಇಳುವರಿ ಮತ್ತು ರೋಗ ನಿರೋಧಕ ತಳಿಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಜೈವಿಕ ಸಂಶೋಧನಾ ಇಲಾಖೆ ಮತ್ತು ನಾಲ್ಕು ಕೃಷಿ ವಿಶ್ವವಿದ್ಯಾನಿಲಯ ಗಳೊಂದಿಗೆ ರಾಜ್ಯ ಸರಕಾರ ಒಡಂಬಡಿಕೆ ಮಾಡಿಕೊಂಡಿದೆ. ಈಗಿರುವ ತಳಿಗಳಿಗಿಂತ ಶೇ.30ರಷ್ಟು ಅಧಿಕ ಇಳುವರಿಯನ್ನು ಈ ಹೊಸ ರಾಗಿ, ಜೋಳ ತಳಿಗಳು ನೀಡಲಿವೆ. ಈ ತಳಿಗಳ ಜೊತೆಗೆ ಶೇಂಗಾ, ತೊಗರಿ ತಳಿಗಳನ್ನು ಅಭಿವೃದ್ಧಿಪಡಿಸಲು ಚಿಂತಿಸಲಾಗಿದೆ. ಈ ತಳಿಗಳು ಶೀಘ್ರದಲ್ಲೇ ರೈತರ ಕೈ ಸೇರಲಿವೆ ಎಂದರು.
ರಾಗಿ ಮತ್ತು ಜೋಳಕ್ಕೆೆ ಕೇಂದ್ರ ಸರಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿಗಳ ಮೂಲಕ ಪತ್ರ ಬರೆಯಲಾಗುವುದು. ರಾಜ್ಯದಲ್ಲಿ ಸದ್ಯ ರಾಗಿಗೆ ಕ್ವಿಂಟಾಲ್‌ಗೆ 1,700 ರೂ. ಹಾಗೂ ಜೋಳಕ್ಕೆ 1,650 ರೂ. ಬೆಂಬಲ ಬೆಲೆ ಕೇಂದ್ರ ಸರಕಾರ ನಿಗದಿಪಡಿಸಿದೆ. ಈ ಕನಿಷ್ಠ ಬೆಂಬಲ ಬೆಲೆಯಿಂದ ರೈತರಿಗೆ ನಷ್ಟವಾಗುತ್ತಿದೆ. ಹೀಗಾಗಿ ರಾಜ್ಯದ ರೈತರ ಹಿತದೃಷ್ಟಿಯಿಂದ ರಾಜ್ಯ ಸರಕಾರವೇ ಬೋನಸ್ ಪ್ರೈಸ್ ಮೂಲಕ 2,100 ರೂ.ಗಳಂತೆ ರೈತರಿಂದ ರಾಗಿ, ಜೋಳವನ್ನು ಖರೀದಿಸಲಾಗುತ್ತಿದೆ ಎಂದರು.
ಪಡಿತರದಲ್ಲಿ ರಾಗಿ, ಜೋಳ: ಕಳೆದ ವರ್ಷ ರೈತರಿಂದ 24 ದಶಲಕ್ಷ ರಾಗಿಯನ್ನು ಬೋನಸ್ ಪ್ರೈಸ್‌ಗೆ ಖರೀದಿಸಲಾಗಿದೆ. ಈ ವರ್ಷದಲ್ಲಿ ಇದೇ ಬೆಲೆಗೆ ಖರೀದಿಸಲಾಗುವುದು. ರೈತರ ಮೂಲಕ ಖರೀದಿಸಿದ ರಾಗಿಯನ್ನು ಪಡಿತರದಲ್ಲಿ ಅಕ್ಕಿಯ ಪರ್ಯಾಯವಾಗಿ ಉಚಿತವಾಗಿ ವಿತರಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಮಾಹಿತಿ ನೀಡಿದರು.
ರಾಸಾಯನಿಕ ಮುಕ್ತ, ಅಧಿಕ ಜೀವ ಸತುಗಳು, ಪೌಷ್ಠಿಕಾಂಶ ಗಳು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಸಾವಯವ ಹಾಗೂ ಸಿರಿಧಾನ್ಯಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಈ ಧಾನ್ಯಗಳ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ರಾಜ್ಯದ ಎಲ್ಲ ನಗರಗಳಲ್ಲಿ ಮೇಳ ಆಯೋಜಿಸಲಾಗುವುದು ಎಂದರು.
ಕಬ್ಬನ್ ಉದ್ಯಾನದಲ್ಲಿ ಸಾವಯವ ಪದಾರ್ಥಗಳನ್ನು ಪ್ರತಿ ರವಿವಾರ ಮಾರಾಟ ಮಾಡಲು ಜೈವಿಕ ಕೃಷಿಕ್ ಸೊಸೈಟಿ, ಹಾಪ್‌ಕಾಮ್ಸ್, ನರ್ಸರಿಮನ್ ಕೋ ಆಪರೇಟಿವ್‌ನ ಮೂರು ಪರಿಸರ ಸ್ನೇಹಿ ಮಾರಾಟ ಮಳಿಗೆಗಳಿಗೆ ಕೃಷಿ ಸಚಿವರು ಚಾಲನೆ ನೀಡಿದರು.
ಮೇಳದಲ್ಲಿ ಸಾವಯವ ಪದಾರ್ಥ ಹಾಗೂ ಸಿರಿಧಾನ್ಯಗಳನ್ನು ಮಾರಾಟ ಮಾಡಲು 30 ಮಳಿಗೆಗಳನ್ನು ತೆರೆಯಲಾಗಿದೆ. ರಾಗಿ, ಸಜ್ಜೆ, ನವಣೆ, ಸಾಮೆ, ಕೊರಲೆ, ವಿವಿಧ ಬಗೆಯ ತರಕಾರಿ ಸೊಪ್ಪು ಹಾಗೂ ಸಿದ್ಧಪಡಿಸಿರುವ ಆಹಾರ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ. ಅಲ್ಲದೆ ಸಾವಯವ ಮತ್ತು ಸಿರಿಧಾನ್ಯಗಳಿಂದ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವ ಪ್ರಕಾರಗಳನ್ನು ಪ್ರಾಯೋಗಿಕವಾಗಿ ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಆಯುಕ್ತ ಪ್ರಭಾಶ್‌ಚಂದ್ರ ರೇ, ಕೃಷಿ ಇಲಾಖೆಯ ಆಯುಕ್ತ ಪಾಂಡುರಂಗ ಬಿ.ನಾಯಕ್, ಜೈವಿಕ್ ಕೃಷಿಕ್ ಸೊಸೈಟಿ ಅಧ್ಯಕ್ಷ ಡಾ.ಕೆ.ರಾಮಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.