ಆದೇಶ ಪಾಲಿಸದಿದ್ದರೆ ಭವಿಷ್ಯಕ್ಕೆ ಮಾರಕ: ಸಚಿವ ಯು.ಟಿ.ಖಾದರ್
Update: 2016-09-10 23:03 IST
ಬೆಂಗಳೂರು, ಸೆ. 10: ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದಿದ್ದರೆ ಭವಿಷ್ಯದಲ್ಲಿ ರಾಜ್ಯಕ್ಕೆ ಮಾರಕ ಆಗಲಿರುವ ಹಿನ್ನೆಲೆಯಲ್ಲಿ ಆದೇಶ ಪಾಲಿಸುವುದು ಅನಿವಾರ್ಯ ಎಂದು ಆಹಾರ ಸಚಿವ ಯು.ಟಿ.ಖಾದರ್ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನಿನನ್ವಯ ಕಾವೇರಿ ನದಿ ನೀರನ್ನು ಹರಿಸುವ ಅಧಿಕಾರ ರಾಜ್ಯದ ಕೈಯಲ್ಲಿದೆ. ಮುಂಬರುವ ದಿನಗಳಲ್ಲಿ ನೀರನ್ನು ಹರಿಸಲು ಸಮಿತಿಯೊಂದನ್ನು ರಚಿಸಿದರೆ ಭವಿಷ್ಯದಲ್ಲಿ ನಮಗೆ ತೊಂದರೆ ಉಂಟಾಗಲಿದೆ ಎಂದು ಆತಂಕಪಟ್ಟರು.
ಕಾವೇರಿ ನದಿ ನೀರಿನ ವಿಚಾರದಲ್ಲಿ ದಕ್ಷಿಣ ಕನ್ನಡ, ಉಡುಪಿ ಸೇರಿ ಕರಾವಳಿ ಭಾಗದ ಜನತೆ ಭಾವನಾತ್ಮಕವಾಗಿ ರಾಜ್ಯದೊಂದಿಗೆ ಇದೆ ಎಂದ ಖಾದರ್, ಕಾವೇರಿ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.