×
Ad

ಮೈಸೂರಿನಲ್ಲಿ ಟಿಪ್ಪುವಿನ ಸಂತತಿ ಹೆಚ್ಚುತ್ತಿದೆ: ಸಂಸದ ಪ್ರತಾಪ್ ಸಿಂಹ

Update: 2016-09-11 11:32 IST

ಭಟ್ಕಳ, ಸೆ.11: ಇತ್ತಿಚೆಗೆ ಮೈಸೂರಿನಲ್ಲಿ ಟಿಪ್ಪುವಿನ ಸಂತತಿ ಹೆಚ್ಚುತ್ತಿದ್ದು, ಅದು ಉಳ್ಳಾಲ ಹಾಗೂ ಭಟ್ಕಳದ ಸಾಲಿಗೆ ಸೇರುತ್ತಿದೆ ಎಂದು ಮೈಸೂರು ಸಂಸದ ಹಾಗೂ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ್ ಸಿಂಹ ಹೇಳಿದ್ದಾರೆ.

ಅವರು ಶನಿವಾರ ಭಟ್ಕಳದ ನಾಗಯಕ್ಷೆ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮೈಸೂರು ರಾಜ್ಯವನ್ನು ಹಿಂದೆ ಅನೇಕ ಪ್ರಸಿದ್ದ ರಾಜ ಮನೆತನಗಳಾದ ಕೃಷ್ಣ ರಾಜ ನರಸಿಂಹ ರಾಜ, ಚಾಮರಾಜ ಮನೆತನದವರು ಆಳಿದ್ದರು. ಆದರೆ ಇಂದು ಮೈಸೂರಿನಲ್ಲಿ ಟಿಪ್ಪುಸಂತತಿ ಹೆಚ್ಚಾಗಿ ಮೈಸೂರು ಉಳ್ಳಾಲ, ಭಟ್ಕಳದ ಸಾಲಿಗೆ ಸೇರುತ್ತಿದೆ. ಆದರೆ, ಒಂದು ಖುಷಿ ಕೊಡುವ ವಿಚಾರವೆಂದರೆ ಭಟ್ಕಳದಲ್ಲಿ ನೀವೆಲ್ಲಾ ಕೇವಲ ಹೆಸರಿಗೆ ಮಾತ್ರ ನಾಯಕರಾಗಿಲ್ಲ. ನಿಜ ಜೀವನದಲ್ಲೂ ನಾಯಕರಾಗಿರುದರಿಂದ ಇಂದು ಭಟ್ಕಳದಲ್ಲಿ ಇನ್ನೂ ಹಿಂದುತ್ವ ಜೀವಂತವಾಗಿ ಉಳಿದಿದೆ ಎಂದರು.

ಸಂಸದ ಅನಂತ ಕುಮಾರ ಹೆಗಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಂಜುನಾಥ ಜನ್ನು, ರಾಜ್ಯ ಪ್ರಮುಖ ನರಸಿಂಹ ಕೊಣೆಮನೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗೋವಿಂದ ನಾಯ್ಕ, ತಾಲೂಕು ಅಧ್ಯಕ್ಷ ರಾಜೇಶ ನಾಯ್ಕ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ್ ನಾಯ್ಕ, ಪಕ್ಷದ ಮುಖಂಡ ಹಾಗೂ ಕಾಸ್ಕಾರ್ಡ ಬ್ಯಾಂಕ್ ಉಪಾಧ್ಯಕ್ಷ ಈಶ್ವರ ನಾಯ್ಕ, ಅನಿಲ್ ಮತ್ನಾಳ ಮುಂತಾದವರು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News