×
Ad

ಸುಪ್ರೀಂ ತೀರ್ಪು ಪಾಲಿಸುವುದು ನಮ್ಮ ಕರ್ತವ್ಯ: ಎಚ್.ಡಿ. ದೇವೇಗೌಡ

Update: 2016-09-11 21:07 IST

ಕುಶಾಲನಗರ, ಸೆ.11: ತಮಿಳುನಾಡಿಗೆ ನೀರು ಬಿಡಲು ನಾವೇ ಹೇಳಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಬೆಳಗ್ಗಿನಿಂದ ಕಬಿನಿ, ಹೇಮಾವತಿ ಮತ್ತು ಕೆಆರ್‌ಎಸ್ ಜಲಾಶಯಗಳಿಗೆ ಭೇಟಿ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಹಾರಂಗಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ನದಿ ನೀರಿನ ಜಲಾಶಯಗಳಲ್ಲಿ ಎಷ್ಷು ಪ್ರಮಾಣದ ನೀರಿದೆ ಎಂದು ವಾಸ್ತವ ತಿಳಿಯಲು ಬಂದಿದ್ದೇನೆ. ಆಕ್ಟೋಬರ್ 18 ರಂದು ಈ ವಿಚಾರವಾಗಿ ಅಂತಿಮ ತೀರ್ಪು ಹೊರಬರುತ್ತದೆ. ಆವರೆಗೆ ಕಾಯೋಣ ಎಂದರು.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಂಘರ್ಷದ ಹೋರಾಟ ಮಾಡುತ್ತಿದ್ದರೆ, ಅದರೆ ನಾವು ನ್ಯಾಯಯುತವಾಗಿ ಹೋರಟ ನೆಡೆಸುತ್ತಿದ್ದೇವೆ. ಸತ್ಯ ಕೇಳುವುದು ತುಂಬಾ ಕಷ್ಟವೆನ್ನಿಸಬಹುದು. ಅದರೆ ನಿಜಾಂಶ ತಿಳಿಯಲು ಸಮಯ ಬೇಕಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ನಾನು ಹೋರಾಟ ಮಾಡಲಾರೆ ಎಂದರು.

ಕಾವೇರಿ ಉಗಮ ಸ್ಥಳವಾದ ಕೊಡಗಿನಲ್ಲೇ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದ್ದು ಈಗಾಲೇ 13 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಹಾರಂಗಿ ಜಲಾಶಯವನ್ನೇ ನಂಬಿಕೊಂಡಿರುವ ಸೋಮವಾರಪೇಟೆ ಜನತೆ ಕುಡಿಯುವ ನೀರಿಗಾಗಿ ಬವಣೆಪಡುತ್ತಿದ್ದಾರೆ. ಅಲ್ಲದೆ, ಹಾರಂಗಿ ಅಚ್ಚುಕಟ್ಟಿನ ಹಾಗೂ ನಾಲೆಯ ವ್ಯಾಪ್ತಿಯ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ನೀರಿಲ್ಲದೆ ಮುಖದಲ್ಲಿ ಅತಂಕದ ಛಾಯೆ ಅವರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಯಾವ ಸರಕಾರದಲ್ಲೂ, ಅಧಿಕಾರದಲ್ಲೂ ಇಲ್ಲ. ನಮ್ಮ ರಾಜ್ಯದ ರೈತರ ನೋವು ಅರ್ಥವಾಗುತ್ತಿದೆ. 2007ರ ಕಾವೇರಿ ನ್ಯಾಯಾಧಿಕರಣ ತೀರ್ಪಿನಂತೆ ನೀರು ಬಿಡುತ್ತಿದ್ದಾರೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಆದ್ದರಿಂದ ರೈತರು ತಾಳ್ಮೆ ಕಳೆದುಕೊಳ್ಳಬೇಡಿ. ನಿಮ್ಮ ಹೋರಟಕ್ಕೆ ನನ್ನ ಬೆಂಬಲವಿದೆ ಎಂದು ಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ, ಕೊಡಗು ಜಿಲ್ಲಾ ಜೆಡಿಎಸ್ ಪ.ಜಾತಿ ಅಧ್ಯಕ್ಷ ಎಂ.ವಿ. ವಿಜಯ್, ರಾಜ್ಯ ಜೆ.ಡಿ.ಎಸ್(ಎಸ್)ನ ಮಹಿಳ ಸದಸ್ಯೆ ಶಶಿ ಸುವರ್ಣ, ಮಂಡ್ಯದ ಲೋಕಸಭೆ ಸದಸ್ಯರಾದ ಎಂ.ಪಿ ಪುಟ್ಟರಾಜ್, ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್,ಪಿರಿಯಾಪಟ್ಟಣ ತಾಲ್ಲೂಕಿನ ಜೆಡಿಎಸ್‌ನ ಅಧ್ಯಕ್ಷ ಮಹದೇವ್, ಪಟ್ಟಣ ಪಂಚಾಯತ್ ಸದಸ್ಯ ಎಚ್.ಡಿ ಚಂದ್ರು, ಜೆಡಿಎಸ್‌ನ ಮುಖಂಡರಾದ ಸಿ.ವಿ. ನಾಗೇಶ್ ಮುಂತಾದವರು ಉಪಸ್ಥಿತರಿದ್ದರು.

ಅಲ್ಲದೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ರಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಕುಮಾರ್, ಎಇಇ ಧರ್ಮರಾಜ್, ಇಂಜಿನಿಯರ್ ನಾಗರಾಜ್ ಹಾಜರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News