ಅಭಿವೃದ್ಧಿಯಿಂದ ವಿಜಯನಗರ ಕಾಲದ ಪಳೆಯುಳಿಕೆಗಳು ನಾಶ
ಯುನೆಸ್ಕೋ ಆಕ್ಷೇಪ
ಬಳ್ಳಾರಿ, ಸೆ.11: ಹೊಸಪೇಟೆ ತಾಲೂಕಿನ ಕಮಲಾಪುರ ಕೆರೆಯ ಪಕ್ಕದಲ್ಲಿ ರಸ್ತೆ ಅಭಿವೃದ್ಧಿಯಿಂದ ವಿಜಯನಗರ ಅರಸರ ಕಾಲದ ಕೆರೆ ತೂಬುಗಳು ನಾಶವಾಗುತ್ತವೆ ಎಂದು ಯುನೆಸ್ಕೋ ಆಕ್ಷೇಪ ಮಾಡಿದೆ.
ಸ್ಮಾರಕ ಪ್ರಿಯರ ಆಕ್ಷೇಪದ ನಡುವೆಯೂ ಸದ್ದಿಲ್ಲದೆ ರಾತ್ರಿ ವೇಳೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಹಿಂದಿನ ಪತ್ರಿಕೆಗಳ ವರದಿಗಳೊಂದಿಗೆ ಯುನೆಸ್ಕೋ ಗಮನಕ್ಕೆ ತಂದಿದ್ದಾರೆ. ಇದರಿಂದ ಯುನಿಸ್ಕೋಕೋದ ಭಾರತದ ಪ್ರತಿನಿಧಿ ಶಿಗೇರು ಅವರು, ಹಂಪಿ ವಿಶ್ವ ಪರಂಪರಾ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಹೊಸಪೇಟೆಯ ಉಪವಿಭಾಗಾಧಿಕಾರಿಗೆ ಪತ್ರ ಬರೆದು ಈ ಕಾಮಗಾರಿಯ ಸಮಗ್ರ ವರದಿಯನ್ನು ಒಂದು ವಾರದೊಳಗಾಗಿ ನೀಡುವಂತೆ ಸೂಚಿಸಿದ್ದಾರೆ. ಇನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಮುಖ್ಯ ನಿರ್ದೇಶಕ, ಹಂಪಿ ಕಿರುವಲಯ ಉಪ ಅಧೀಕ್ಷಕ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಗೂ ಪತ್ರದ ಪ್ರತಿಯನ್ನು ಇ-ಮೇಲ್ ಮೂಲಕ ರವಾನಿಸಿದ್ದಾರೆ.