×
Ad

ಈದ್ಗಾ ಮೆದಾನದಲ್ಲಿ ಗಮನ ಸೆಳೆಯುತ್ತಿರುವ ವಿವಿಧ ತಳಿಗಳ ಕುರಿಗಳು

Update: 2016-09-11 23:26 IST

 ಬಾಬುರೆಡ್ಡಿ.ಕೆ.ಬಿ. ಚಿಂತಾಮಣಿ
  ಬೆಂಗಳೂರು, ಸೆ.11: ಬಕ್ರೀದ್ ಆಚರಣೆಗೆ ಕ್ಷಣಗಣನೆ ಆರಂಭವಾದ ಹಿನ್ನೆಲೆಯಲ್ಲಿ ನಗರದ ನಾನಾ ಮಾರುಕಟ್ಟೆಗಳಲ್ಲಿ ನಾಟಿ ಮತ್ತು ಮಿಶ್ರತಳಿಯ ವಿವಿಧ ಬಣ್ಣ, ಎತ್ತರ, ಆಕಾರವುಳ್ಳ ಕುರಿ ಮತ್ತು ಮೇಕೆಗಳ ಹಿಂಡು ಕಾಣುತ್ತಿದ್ದು, ಮಾರಾಟ ಬಿರುಸಿನಿಂದ ಸಾಗುತ್ತಿದೆ.
 ನಗರದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿರುವ ಕುರಿ ಮಾರುಕಟ್ಟೆಯಲ್ಲಿ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳ ಕುರಿಗಳು ಮಾರಾಟಕ್ಕೆ ಲಭ್ಯವಿದೆ. ಈ ಬಾರಿ ಮಾರುಕಟ್ಟೆಯಲ್ಲಿ ಕುರಿ ಬೆಲೆ ತುಸು ಜಾಸ್ತಿಯಾಗಿದ್ದರೂ, ಕುರಿಗಳು ಕಡಿಮೆ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಸದ್ಯ ಮಾರಾಟ ವಾಗುತ್ತಿರುವ ಕುರಿಗಳ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದೆ.
‘ಬಕ್ರೀದ್’ ಮುಸಲ್ಮಾನರ ಪವಿತ್ರವಾದ ಹಬ್ಬವಾಗಿದ್ದು, ಶ್ರದ್ಧಾ, ಭಕ್ತಿಗಳೊಂದಿಗೆ ದೇವರಿಗೆ ಕುರಿಗಳನ್ನು ಬಲಿಕೊಡುವುದು ಸಂಪ್ರದಾಯ. ಮಾಂಸವನ್ನು ಬಡವರು, ಸಂಬಂಧಿಕರಿಗೆ ದಾನ ಮಾಡುವುದು ಈ ಹಬ್ಬದ ವಿಶೇಷ. ಒಂದು ರೀತಿಯಲ್ಲಿ ಹಂಚಿ ಉಣ್ಣುವ ಸಂಸ್ಕೃತಿಯ ಪ್ರತೀಕವೂ ಹೌದು.
 ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ರುವ ಕುರಿ ಮಾರುಕಟ್ಟೆಯು ಗ್ರಾಹಕರ ನಂಬಿಕೆಯ ತಾಣವಾಗಿ ರೂಪುಗೊಂಡಿದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಮಾರುಕಟ್ಟೆಯು ಬಕ್ರೀದ್ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯ ಕೇಂದ್ರವಾಗಿ ಬದಲಾಗುತ್ತದೆ.

ಕುರಿಗಳ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿರುವುದು ಮಾರಾಟಗಾರರ ನಿರಾಸೆಗೆ ಕಾರಣವಾಗಿದೆ. ಕುರಿಗಳ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರು ಹಾಗೂ ಮಾರಾಟಗಾರರಿಗೆ ಸಮಸ್ಯೆ ತಂದಿದೆ. ಬಕ್ರೀದ್‌ಗಾಗಿಯೆ ಸಾಕುವ ಕುರಿಗಳನ್ನು 35-40 ಸಾವಿರ ರೂ.ಬೆಲೆ ನಿಗದಿ ಮಾಡಿದರೆ, ಗ್ರಾಹಕರು ಅದೇ ಕುರಿಯನ್ನು 15-20 ಸಾವಿರ ರೂ.ಗೆ ಕೇಳುತ್ತಾರೆ ಎಂದು ಕುರಿ ವ್ಯಾಪಾರಿ ನಾಗರಾಜು ಬೇಸರ ವ್ಯಕ್ತಪಡಿಸುತ್ತಾರೆ.
 ವಿವಿಧ ತಳಿಯ ಕುರಿಗಳ ಸಂಗಮ: ರಾಜ್ಯದ ಬನ್ನೂರು, ಹಾವೇರಿ, ಚಿತ್ರದುರ್ಗ, ಮುಧೋಳ, ಮಾಗಡಿ, ನೆಲಮಂಗಲ, ಮಂಡ್ಯ, ಚನ್ನಪಟ್ಟಣ, ಆನೇಕಲ್, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಕೆಜಿಎಫ್ ಹಾಗೂ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಅನೇಕ ಭಾಗಗಳಿಂದ ಮಾರಾಟಗಾರರು ಈ ಮಾರುಕಟ್ಟೆಗೆ ಬಂದಿದ್ದಾರೆ.
ಕೆಂದಕುರಿ, ಬಿಳಿಕುರಿ, ಟಗರು, ಕರಿ ಹೋತ, ಬಿಳಿ ಹೋತ ಸೇರಿದಂತೆ ಹಲವು ಬಗೆಯ ಕುರಿಗಳು ಮಾರಾಟಕ್ಕೆ ಲಭ್ಯವಿದೆ. ಜೊತೆಗೆ ಹಾಸನದ ಗೆಣಸಿ, ಮಂಡ್ಯದ ಕಿರುಗಾವಲು ಭಾಗಗಳ ಕುರಿಗಳು, ಹೋತ, ಮೈಲಾರಿ, ಕರಿಕುರಿ, ಟಗರು ಜಾತಿಯ ಕುರಿಗಳೂ ಮೈದಾನದಲ್ಲಿ ಬಿಡಾರ ಹೂಡಿವೆ.
 ರಾಜ್ಯದ ಕುರಿಗೆ ಭಾರಿ ಬೇಡಿಕೆ: ಮೈದಾನ ದಲ್ಲಿ ಹೊರ ರಾಜ್ಯದ ಕುರಿಗಳ ಸಂಖ್ಯೆ ಕಡಿಮೆ ಇದ್ದು, ರಾಜ್ಯದ ಕುರಿಗಳೆ ಹೆಚ್ಚಿವೆ. ಅಲ್ಲದೆ, ಹೊರ ರಾಜ್ಯದವರು ಈ ಮಾರುಕಟ್ಟೆಯಿಂದ ಕುರಿಗಳನ್ನು ಖರೀದಿಸುತ್ತಿರುವುದು ಕಂಡು ಬಂತು. ಇವುಗಳಲ್ಲಿ ಬನ್ನೂರು ಕುರಿ, ಜಮುನಾಪುರಿ ತಳಿ, ಅಮೀನ್‌ಘಡ ತಳಿಗಳಿಗೆ ಬೇಡಿಕೆ ಹೆಚ್ಚಿದೆ.
ಅಮೀನ್‌ಘಡ ತಳಿಯ ಕುರಿಯೊಂದಕ್ಕೆ 80 ಸಾವಿರದಿಂದ 3ಲಕ್ಷ ರೂ.ವರೆಗೆ ಮಾರಾಟವಾಗುತ್ತಿದೆ. ಜೊತೆಗೆ ಕಂದುಕುರಿ 50 ಸಾವಿರ ರೂ.ಗಳಿಗೆ ಮಾರಾಟವಾದರೆ, ಬಿಳಿಕುರಿ 10ರಿಂದ 15 ಸಾವಿರ ರೂ.ಗಳಿಗೆ ಬಿಕರಿಯಾಗುತ್ತಿವೆ. ಉಳಿದಂತೆ ನಾಟಿ ತಳಿಯ ಕುರಿ ಮತ್ತು ಮೇಕೆಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
  ಏರಿದ ಮಾಂಸದ ದರ: ಹಬ್ಬದ ಹಿನ್ನೆಲೆಯಲ್ಲಿ ಮಾಂಸದ ಮಾರುಕಟ್ಟೆಯಲ್ಲಿ ಕುರಿ ಮತ್ತು ಮೇಕೆ ಮಾಂಸದ ಬೆಲೆ ಹೆಚ್ಚಳವಾಗಿದೆ. ಮಾಂಸದ ಅಂಗಡಿಯಲ್ಲಿ ಈ ಹಿಂದೆ 380 ರಿಂದ 400 ರೂ.ಗಳಷ್ಟಿದ್ದ ದರ, ಇದೀಗ 400-450 ರೂ.ಗಳಿಗೆ ಏರಿದೆ. ಬಾಡೂಟದ ಭರದಲ್ಲಿ ಬೇಡಿಕೆ ಹೆಚ್ಚಿದರೆ ದರದಲ್ಲೂ ಏರಿಕೆಯಾಗುವ ಸಾಧ್ಯತೆೆಗಳಿವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ಈ ಮಾರುಕಟ್ಟೆಗೆ ನಾನು ಐದು ವರ್ಷಗಳಿಂದ ಕುರಿಗಳನ್ನು ತಂದು ಮಾರಾಟ ಮಾಡುತ್ತಿದ್ದೇನೆ. ಆದರೆ, ಇಲ್ಲಿ ಗ್ರಾಹಕರು ಅಸಲುಗಿಂತ ಕಡಿಮೆ ಬೆಲೆಗೆ ಕುರಿಗಳನ್ನು ಕೇಳುತ್ತಾರೆ. ಇದರಿಂದಾಗಿ, ಸಮಸ್ಯೆ ಉಂಟಾಗುತ್ತದೆ. ನಾವು ಬೇರೆಡೆಯಿಂದ ಖರೀದಿಸಿ ತಂದ ಕುರಿಗಳನ್ನು ಮಾರಾಟ ಮಾಡಿಯೇ ಮನೆಗೆ ಹೋಗ ಬೇಕು. ಮಾರಾಟ ಆಗದೆ ಉಳಿದು ಕೊಳ್ಳುವ ಕುರಿಗಳನ್ನು ವಾಪಸ್ಸು ಮನೆಗೆ ಕರಕೊಂಡು ಹೋಗಿ ಸಾಕಣೆ ಮಾಡುವುದು ಕಷ್ಟಕರ’
ಶಿವಣ್ಣ, ಕುರಿ ವ್ಯಾಪಾರಿ ನಾಗದೇನಹಳ್ಳಿ

‘ಕಳೆದ ಬಾರಿ ಹೊರ ರಾಜ್ಯಗಳು ಸೇರಿ ದಂತೆ ನಾನಾ ಕಡೆಗಳಿಂದ ವಿವಿಧ ತಳಿಗಳು ಇಲ್ಲಿಗೆ ಮಾರಾಟಕ್ಕೆ ಬಂದಿದ್ದು, ವ್ಯಾಪಾರ ವಹಿವಾಟು ಜೋರಾಗಿ ನಡೆದಿತ್ತು. ಆದರೆ, ಈ ಬಾರಿ ರಾಜ್ಯದ ತಳಿಗಳು ಹೆಚ್ಚಾಗಿ ಮಾರಾಟಕ್ಕೆ ಬಂದಿವೆ. ಜೊತೆಗೆ ಈ ಬಾರಿ ಹೆಚ್ಚಿನ ಮಟ್ಟದಲ್ಲಿ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಕುರಿಗಳನ್ನು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’
ಮಂಜೇಗೌಡ, ವ್ಯಾಪಾರದ ದಲ್ಲಾಳಿ


 ‘ನಾನು ಮೊದಲ ಬಾರಿ ಇಲ್ಲಿಗೆ ಕುರಿಗಳನ್ನು ಮಾರಾಟ ಮಾಡಲು ಬಂದಿದ್ದೇನೆ. 30 ಸಾವಿರ ರೂ.ಬೆಲೆ ಬಾಳುವ ಕಾಶ್ಮೀರಿ ತಳಿಯ ಕುರಿಯನ್ನು ಕೇವಲ 12 ರಿಂದ 15 ಸಾವಿರ ರೂ.ಗಳಿಗೆ ಗ್ರಾಹಕರು ಕೇಳುತ್ತಿದ್ದು, ದೂರದ ಊರಿನಿಂದ ಇಲ್ಲಿಗೆ ಮಾರಾಟಕ್ಕೆ ಬಂದಿರುವುದು, ಈಗ ಮಾರಾಟ ಮಾಡದೆ ಹಿಂದಿರುಗಲುಆಗುವುದಿಲ್ಲ’.
ರಝಾಕ್, ಕುರಿ ವ್ಯಾಪಾರಿ ಕೆಜಿಎಫ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News