ಕಾವೇರಿ ಪ್ರತಿಭಟನೆ : ಹಿಂಸಾಚಾರದಿಂದ ಬೆಂಗಳೂರಿನ ವರ್ಚಸ್ಸಿಗೆ ಕುತ್ತು
ಬೆಂಗಳೂರು, ಸೆ.13: ಕಾವೇರಿ ವಿವಾದದ ಸಂಬಂಧ ಭುಗಿಲೆದ್ದಿರುವ ವ್ಯಾಪಕ ಹಿಂಸಾವಾರದಿಂದಾಗಿ, ಕರ್ನಾಟಕ-ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಪ್ರಮುಖ ಮೂಲಸೌಕರ್ಯ ಹಾನಿ, ರಸ್ತೆ, ರೈಲು, ವಿಮಾನ ಸಹಿತ ಸಂಚಾರ ಅಡಚಣೆ, ಕಚೇರಿ, ಕಾರ್ಖಾನೆಗಳಿಗೆ ಹಾಗೂ ಅಲ್ಲಿಂದ ಮನೆಗಳಿಗೆ ನೌಕರರ ಸುರಕ್ಷಿತ ಆಗಮನ-ನಿರ್ಗಮನ ಅಸಾಧ್ಯವಾಗಿದೆ. ಇದರಿಂದಾಗಿ ರೂ. 22ರಿಂದ 25 ಸಾವಿರ ಕೋಟಿ ನಷ್ಟವನ್ನು ಅಂದಾಜಿಸಲಾಗಿದೆಯೆಂದು ಅಸೋಚಾಮ್ ಇಂದು ತಿಳಿಸಿದೆ.
ರಾಜ್ಯದ ರಾಜಧಾನಿ ಹಾಗೂ ಇತರ ಭಾಗಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಸರಿಸುಮಾರು ಎಲ್ಲ ಪಾರ್ಚೂನ್ 500 ಕಂಪೆನಿಗಳಿಗೆ ಮನೆಯಾಗಿರುವ ಬೆಂಗಳೂರಿನ, ಭಾರತದ ಸಿಲಿಕಾನ್ ಕಣಿವೆಯೆಂಬ ವರ್ಚಸ್ಸಿಗೆ ಧಕೆ ತಂದಿದೆ ಎಂದಿರುವ ಅತ್ಯುನ್ನತ ಕೈಗಾರಿಕಾ ಸಂಘಟನೆ, ಶಾಂತಿ ಕಾಪಾಡುವಂತೆ ಕರ್ನಾಟಕ ಹಾಗೂ ತಮಿಳುನಾಡುಗಳಿಗೆ ಮತ್ತೆ ಮತ್ತೆ ಮನವಿ ಮಾಡಿದೆ.
ಹಿಂಸಾತ್ಮಕ ಘಟನೆಗಳು ಹಬ್ಬಿರುವ ವಿಧಾನವು ಮುಖ್ಯವಾಗಿ ಬೆಂಗಳೂರಿನ ವ್ಯಾಪಾರ ಮತ್ತು ಕೈಗಾರಿಕಾ ಸಮುದಾಯದ ನೈತಿಕತೆಯನ್ನು ಕುಗ್ಗಿಸಿದೆ. ಬೆಂಗಳೂರಿನ ಸುತ್ತ ಭಾರತವು ರೂಪಿಸಿರುವ ‘ಸಿಲಿಕಾನ್ ಕಣಿವೆಯೆಂಬ’ ಹೆಗ್ಗಳಿಕೆಗೆ ಕಳಂಕ ಬಂದಿದೆಯೆಂದು ಅಸೋಚಾಮ್‌ನ ಪ್ರಧಾನ ಕಾರ್ಯದರ್ಶಿ ಡಿ.ಎಸ್. ರಾವತ್ ಹೇಳಿದ್ದಾರೆ.
ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳು ಯಾವುದೇ ಪರಿಸ್ಥಿತಿಯಲ್ಲೂ ಕಾನೂನು-ಸುವ್ಯವಸ್ಥೆಯೊಂದಿಗೆ ರಾಜಿಗೆ ಅವಕಾಶ ನೀಡಬಾರದು. ನೀರು ಮೂಲಭೂತ ಅಗತ್ಯ ಹಾಗೂ ಭಾವನಾತ್ಮಕ ವಿಷಯವಾಗಿರುವುದರಿಂದ ಕಿಡಿಗೇಡಿಗಳು, ಪರಿಸ್ಥಿತಿಯ ದುರ್ಲಾಭ ಪಡೆದು ಬೆಂಗಳೂರು ಹಾಗೂ ಚೆನ್ನೈಗಳಲ್ಲಿ ನೆಲೆಸಿರುವ ದೇಶಾದ್ಯಂತದ ಹಾಗೂ ವಿದೇಶಗಳ ಶಾಂತಿ ಪ್ರಿಯ ನೌಕರ ವರ್ಗಕ್ಕೆ ಬೆದರಿಕೆಯೆಂಟು ಮಾಡುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.