×
Ad

ಕಿಡಿಗೇಡಿಗಳ ‘ಕುಚೋದ್ಯ’ಕ್ಕೆ ಹೊತ್ತಿ ಉರಿದ ಉದ್ಯಾನನಗರಿ

Update: 2016-09-13 23:34 IST

ಬೆಂಗಳೂರು, ಸೆ. 13: ಕಾವೇರಿ ನದಿ ನೀರು ಹಂಚಿಕೆ ವಿಚಾರ ಸಂಬಂಧ ತಮಿಳುನಾಡಿನ ಕಿಡಿಗೇಡಿಗಳು ಕುಂದಾಪುರದ ಟ್ರಾವೆಲ್ಸ್ ಏಜೆಂಟ್ ಮಂಜುನಾಥ ಕುಲಾಲ ಎಂಬವರ ಮೇಲೆ ಥಳಿಸಿದ ವೀಡಿಯೊ ದೃಶ್ಯ ಖಾಸಗಿ ಸುದ್ದಿವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಕ್ಕೆ ಬಿತ್ತರಗೊಂಡ ಹಿನ್ನೆಲೆಯಲ್ಲಿ ಉದ್ಯಾನನಗರಿ ಅಕ್ಷರಶಃ ಹೊತ್ತಿಉರಿದಿದೆ.

‘ಕಾವೇರಿ ತಮಿಳುನಾಡಿಗೆ ಸೇರಿದ್ದು’ ಎಂದು ತಮಿಳಿನಲ್ಲಿ ಹೇಳುವಂತೆ ಒತ್ತಾಯ ಮಾಡಿದ್ದು, ಮಂಜುನಾಥ ಕುಲಾಲ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರೂ, ಆತನನ್ನು ಮನಸೋ ಇಚ್ಛೆ ಥಳಿಸಿದ ಗುಂಪು, ಕಾವೇರಿ ತಮಿಳುನಾಡಿಗೆ ಸೇರಿದ್ದು ಎಂದು ಹೇಳಿಸುವ ಮೂಲಕ ಕುಚೋದ್ಯ ಮೆರೆದಿದ್ದಾರೆ.
ಆ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಇಲ್ಲಿನ ಮೈಸೂರು ರಸ್ತೆಯಲ್ಲಿನ ಸ್ಯಾಟ್‌ಲೈಟ್ ಬಸ್ ನಿಲ್ದಾಣದಲ್ಲಿನ ಅಡಿಯಾರ್ ಆನಂದ್ ಭವನ್ ಹೊಟೇಲ್ ಮೇಲೆ ಕಲ್ಲು ತೂರಾಟ ನಡೆಸಿದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಲ್ಲಿನ ಟಿಂಬರ್ ಯಾರ್ಡ್ ಲೇಔಟ್‌ನಲ್ಲಿ ಸುಮಾರು 20ಕ್ಕೂ ಹೆಚ್ಚು ಲಾರಿಗಳಿಗೆ ಬೆಂಕಿ ಹಚ್ಚಲಾಗಿದೆ. ಹಾಗೆಯೇ ಡಿಸೋಜಾನಗರದ ಗೋಡೌನ್‌ನಲ್ಲಿ ನಿಲ್ಲಿಸಿದ್ದ ತಮಿಳುನಾಡು ಮೂಲಕ ಕೆಪಿಎನ್ ಟ್ರಾನ್ಸ್‌ಪೋರ್ಟ್‌ನ ಸುಮಾರು 30 ಬಸ್‌ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.
ಚೆನ್ನೈನ ಮೈಲಾಪೂರ ಎಂಬಲ್ಲಿ ಕನ್ನಡಿಗರ ಒಡೆತನದ ಪ್ರತಿಷ್ಠಿತ ವುಡ್‌ಲ್ಯಾಂಡ್ಸ್ ಹೊಟೇಲ್ ಮೇಲೆ ನಿನ್ನೆ ಬೆಳಗ್ಗೆ ಕಿಡಿಗೇಡಿಗಳು ದಾಳಿ ನಡೆಸಿದ್ದು, ಗಾಜುಗಳನ್ನು ಪುಡಿ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ಕನ್ನಡಿಗರು ಹೆಚ್ಚಿರುವ ಪ್ರದೇಶಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ.
ಈ ಮಧ್ಯೆ ತಮಿಳುನಾಡಿನ ರಾಮೇಶ್ವರಂ ದೇವಸ್ಥಾನಕ್ಕೆ ರಾಜ್ಯದಿಂದ ಭಕ್ತರನ್ನು ಕರೆದೊಯ್ದಿದ್ದ ಭಕ್ತರ ವಾಹನಗಳ ಮೇಲೆ ನಾಮ್ ತಮಿಳರ್ ಇಯಕ್ಕಂ(ನಾವು ತಮಿಳರು ಸಂಘಟನೆ)ಗೆ ಸೇರಿದಂತೆ ಕಾರ್ಯಕರ್ತರು ದಾಳಿ ನಡೆಸಿದ್ದು ಕಿಟಕಿಗಳ ಗಾಜನ್ನು ಪುಡಿಗೈದಿದ್ದು, ಹಿಂಸಾಚಾರ ನಡೆಸಿದ್ದಾರೆ.
ಬೆಂಗಳೂರು ಸೇರಿದಂತೆ ಕಾವೇರಿ ನದಿ ಪ್ರಾಂತದ ಪ್ರದೇಶವಾದ ರಾಮನಗರ, ನಂಜನಗೂಡು, ಪಾಂಡವಪುರ ಹಾಗೂ ಚಾಮರಾಜನಗರಗಳಲ್ಲಿ ತಮಿಳುನಾಡಿನ ನೋಂದಣಿಯ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅತ್ತಿಬೆಲೆಯಲ್ಲಿ ರಾಜ್ಯದಿಂದ ತಮಿಳುನಾಡಿನತ್ತ ಸಂಚರಿಸುವ ಹಾಗೂ ಆ ಕಡೆಯಿಂದ ರಾಜ್ಯಕ್ಕೆ ಬರುವ ವಾಹನಗಳ ಓಡಾಟ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಅರ್ಧ ಸುಟ್ಟಿದ್ದ ಬಸ್‌ಗೆ ಮತ್ತೆ ಬೆಂಕಿ
ಬೆಂಗಳೂರು, ಸೆ.13: ಮೈಸೂರು ರಸ್ತೆ ಚಾಮರಾಜಪೇಟೆಯ ಟಿಂಬರ್‌ಯಾರ್ಡ್ ಲೇಔಟ್‌ನಲ್ಲಿ ಅರ್ಧ ಸುಟ್ಟಿದ್ದ ಎಸ್‌ಆರ್‌ಎಸ್ ಬಸ್‌ನ್ನು ಕಿಡಿಗೇಡಿಗಳು ಮಂಗಳವಾರ ಸಂಪೂರ್ಣವಾಗಿ ಸುಟ್ಟು ಹಾಕಿದ್ದಾರೆ.

ಪೊಲೀಸರ ಅನುಪಸ್ಥಿತಿಯಲ್ಲಿ ಕರ್ಫ್ಯೂ ಹಾಗೂ ನಿಷೇಧಾಜ್ಞೆ ನಡುವೆಯೇ ಈ ಘಟನೆ ನಡೆದಿದೆ. ಸೋಮವಾರ ಉದ್ರಿಕ್ತರು ಬಸ್‌ಗೆ ಬೆಂಕಿ ಹಚ್ಚಿದ್ದರು. ಬಸ್ ಅರ್ಧ ಸುಟ್ಟಿತ್ತು. ಅದನ್ನು ಮಂಗಳವಾರ ಮತ್ತೆ ಬೆಂಕಿ ಹಚ್ಚಿ ಸಂಪೂರ್ಣ ಸುಟ್ಟು ಹಾಕಲಾಗಿದೆ. ಸೋಮವಾರ ಇದೇ ಭಾಗದಲ್ಲಿ 40ಕ್ಕೂ ಹೆಚ್ಚು ಲಾರಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಇಂದು ಕೂಡ ಇಲ್ಲಿ ಸಣ್ಣಪುಟ್ಟ ಗಲಾಟೆ ನಡೆದಿದೆ. ತಿಗಳರ ಪಾಳ್ಯದಲ್ಲಿ ಒಂದು ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ತೆರಳುತ್ತಿದ್ದ ತಮಿಳುನಾಡು ಮೂಲದ ಕ್ಯಾಂಟರ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಳಗ್ಗೆ 9ಕ್ಕೆ ಈ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News