ಕಾವೇರಿ ವಿವಾದ ಕಿಚ್ಚಿಗೆ ಇಬ್ಬರು ಬಲಿ
ಬೆಂಗಳೂರು, ಸೆ.13: ನಿನ್ನೆ ರಾತ್ರಿ ಪೊಲೀಸರು ನಡೆಸಿದ ಲಾಠಿ ಪ್ರಹಾರದ ಹಿನ್ನೆಲೆಯಲ್ಲಿ ಗಾಬರಿಯಿಂದ ಕಟ್ಟಡವೊಂದರ ಮೂರನೆ ಮಹಡಿಯಿಂದ ಹಠಾತ್ತನೆ ಕೆಳಗೆ ಜಿಗಿದು ತೀವ್ರವಾಗಿ ಗಾಯಗೊಂಡಿದ್ದ ಕುಮಾರ್‌ಎಂಬವರು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.
ಹೀಗಾಗಿ ಕಾವೇರಿ ಕಿಚ್ಚಿಗೆ ರಾಜ್ಯದಲ್ಲಿ ಇಬ್ಬರು ಬಲಿಯಾದಂತೆ ಆಗಿದೆ. ನಿನ್ನೆ ರಾತ್ರಿ ಇಲ್ಲಿನ ಮಾಗಡಿ ರಸ್ತೆಯಲ್ಲಿನ ಕೊಟ್ಟಿಗೆಪಾಳ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಮೇಲೆ ಪೊಲೀಸ್ ಲಾಠಿ ಪ್ರಹಾರ ನಡೆಸುತ್ತಿದ್ದರು. ಈ ವೇಳೆ ಆದೇ ಮಾರ್ಗದಲ್ಲಿ ಬರುತ್ತಿದ್ದ ಕುಮಾರ್ ಆತಂಕಗೊಂಡು ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದ ಮೂರನೆ ಮಹಡಿಗೆ ಹೋಗಿದ್ದಾನೆ ಎಂದು ಹೇಳಲಾಗಿದೆ.
ಅದೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ರಕ್ಷಣೆಗಾಗಿ ತಪ್ಪಿಸಿಕೊಳ್ಳಲು ರಾತ್ರಿ 10:30ರ ಸುಮಾರಿಗೆ ಮೂರನೆ ಮಹಡಿಯಿಂದ ಕೆಳಗೆ ಹಾರಿದ್ದು, ಕೈ-ಕಾಲು, ಬೆನ್ನಿನ ಮೂಳೆ ಮುರಿದಿದ್ದು, ಮೆದುಳಿಗೆ ತೀವ್ರ ಸ್ವರೂಪದ ಪೆಟ್ಟು ತಗುಲಿತ್ತು. ಆ ಹಿನ್ನೆಲೆಯಲ್ಲಿ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಆದರೆ, ಇಂದು ಮಧ್ಯಾಹ್ನ 2:30ರ ಸುಮಾರಿಗೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ. ಮೃತ ಕುಮಾರ್, ಕಬ್ಬಿಣ ಕಟ್ಟುವ ಕೆಲಸ ಮಾಡುತ್ತಿದ್ದು, ನಗರದ ಸುಂಕದಕಟ್ಟೆ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಮಧ್ಯೆ ನಿನ್ನೆಯೆಷ್ಟೇ ಪೊಲೀಸ್ ಫೈರಿಂಗ್‌ನಿಂದ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ತುಮಕೂರು ಮೂಲಕದ ಉಮೇಶ್ ಎಂಬವರಿಗೆ ರಾಜ್ಯ ಸರಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಉಮೇಶ್ ಅವರ ಪಾರ್ಥಿವ ಶರೀರವನ್ನು ಕುಣಿಗಲ್ ಸಮೀಪ ಶವ ಸಂಸ್ಕಾರ ನೆರವೇರಿಸಲಾಯಿತು ಎಂದು ಗೊತ್ತಾಗಿದೆ.
ಮೂವರು ಮಕ್ಕಳು ನಾಪತ್ತೆ ಬೆಂಗಳೂರು, ಸೆ.13: ಕಾವೇರಿ ಹೋರಾಟದ ಬಿಸಿಯಲ್ಲಿ ಲಗ್ಗೆರೆಯ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಾಪತ್ತೆಯಾದವರನ್ನು ಶ್ರೀಕಾಂತ್(11), ದರ್ಶನ್(15), ಕುಮಾರ್(15) ಎಂದು ಗುರುತಿಸಲಾಗಿದೆ.
ಉಮೇಶ್ ಕುಟುಂಬಕ್ಕೆ 5 ಲಕ್ಷ ರೂ. ನೆರವು
ಬೆಂಗಳೂರು, ಸೆ. 13: ಕಾವೇರಿ ವಿವಾದ ಹಿನ್ನೆಲೆಯಲ್ಲಿ ಇಲ್ಲಿನ ಹೆಗ್ಗನಹಳ್ಳಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಯುವಕ ಉಮೇಶ್ ಅವರ ಕುಟುಂಬಕ್ಕೆ ರಾಜ್ಯ ಒಕ್ಕಲಿಗರ ಸಂಘ 5ಲಕ್ಷ ರೂಪಾಯಿ ಪರಿಹಾರವನ್ನು ಪ್ರಕಟಿಸಿದೆ.
ಈ ಸಂಬಂಧ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ, ಸೆ.14ರಂದು ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಪರಿಹಾರ ಮೊತ್ತದ ಚೆಕ್ ಹಸ್ತಾಂತರಿಸಲಾಗುವುದು ಎಂದು ಪ್ರಕಟನೆಯಲ್ಲಿ ಮಾಹಿತಿ ನೀಡಿದ್ದಾರೆ.