ಸೆ.15ರಂದು ಸಿಎಂ ಜೊತೆ ಚರ್ಚೆ: ಎಚ್.ಡಿ. ದೇವೇಗೌಡ
ಹಾಸನ, ಸೆ.14: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಕಳೆದ 9 ದಿನಗಳಿಂದ ನಡೆಸಲಾಗುತ್ತಿರುವ ಅಹೋರಾತ್ರಿ ಧರಣಿಯನ್ನು ಕೊನೆಗಳಿಸಲು ಸೂಚಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ನಾಳೆ ಚರ್ಚೆ ನಡೆಸುವ ಕುರಿತು ಮುಖ್ಯಮಂತ್ರಿಗಳೇ ಕರೆ ಮಾಡಿದ್ದಾರೆ ಎಂದು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಕಳೆದ 9 ದಿನಗಳಿಂದ ನಡೆಸಲಾಗುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು, ನೀರಿನ ವಿಚಾರ ಹಾಗೂ ರೈತರ ಬೆಳೆಗೆ ಪರಿಹಾರ ನೀಡುವ ಬಗ್ಗೆ ನಾಳೆ ಸಿಎಂ ಜೊತೆ ಚರ್ಚೆ ನಡೆಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು. ನಾಡಿನಲ್ಲೆ ನೀರಿನ ಸಮಸ್ಯೆ ಇರುವಾಗ ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಬಸ್, ಲಾರಿಯನ್ನು ಸುಟ್ಟು ಹಾಕಿದ್ದಾರೆ. ತಾಳ್ಮೆ ಕಳೆದುಕೊಳ್ಳುವುದು ಬೇಡ. ಶಾಂತಿಯುತವಾಗಿ ಹೋರಾಟ ಮಾಡೋಣ ಎಂದು ಕಿವಿಮಾತು ಹೇಳಿದರು.
ಹಾಸನ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜನತೆ ಹೋರಾಟ ಮಾಡುತ್ತಿದ್ದಾರೆ. ಪಕ್ಷದಿಂದ ಹೇಮಾವತಿ ಅಣೆಕಟ್ಟಿಗೆ ಮುತ್ತಿಗೆ ಹಾಕಿದರೆ ಪೊಲೀಸರು ಬಂಧಿಸುತ್ತಾರೆ ಆದರೇ ಸಮಸ್ಯೆ ಬಗೆಹರಿಯುವುದಿಲ್ಲ. ಸುಪ್ರಿಂ ಕೋರ್ಟ್ ವಿರುದ್ಧ ನಡೆದುಕೊಂಡರೇ ಪ್ರಜಾಪ್ರಭುತ್ವ ನಾಶವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
1865 ರಿಂದ ತಮಿಳುನಾಡಿನ ಜೊತೆ ಜಗಳ ನಡೆಯುತ್ತಿದೆ. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಈ ವೇಳೆ ತಮಿಳುನಾಡು, ಕೇರಳ, ಪಾಂಡಿಚೇರಿಗೆ ನೋಟಿಸ್ ಕೊಡಲಾಗಿತ್ತು. ಜಯಲಲಿತ ಕೂಡ ಕೋರ್ಟಿಗೆ ಅರ್ಜಿ ಹಾಕಿಕೊಂಡರು. ನಾರಿಮನ್ ವಿರುದ್ಧ ಯಾರು ವಿರೋಧ ಮಾಡುವುದಕ್ಕೆ ಆಗಲ್ಲ. ವಿಷಯ ತಿಳಿಯದೆ ಬಾಯಿಗೆ ಬಂದಂತೆ ಮಾತನಾಡಬಾರದು ಎಂದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಜನ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬಿ.ಎಂ. ರಸ್ತೆಯಲ್ಲಿ ಜನಜಂಗುಳಿ ಕಂಡು ಬಂದಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಾರಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ರಸ್ತೆ ಎರಡು ಬದಿಯಲ್ಲೂ ವಾಹನವನ್ನು ನಿಲ್ಲಿಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಇದೆ ವೇಳೆ ಜೆಡಿಎಸ್ ಪಕ್ಷದ ಶಾಸಕ ಎಚ್.ಡಿ. ರೇವಣ್ಣ, ಎಚ್.ಎಸ್. ಪ್ರಕಾಶ್, ಸಿ.ಎನ್.ಬಾಲಕೃಷ್ಣ, ಎಚ್.ಕೆ. ಕುಮಾರಸ್ವಾಮಿ, ಕೆ.ಎಂ. ಶಿವಲಿಂಗೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಮಾಜಿ ಶಾಸಕ ಎ.ಟಿ. ರಾಮಸ್ವಾಮಿ, ಪಕ್ಷದ ಮುಖಂಡರಾದ ಚನ್ನವೀರಪ್ಪ, ರಾಜಶೇಖರ್, ತೋ.ಚ. ಅನಂತಸುಬ್ಬರಾವ್, ದೊಡ್ಡೇಗೌಡ, ವಾನಿರೇವಣ್ಣ, ಕೆ.ಎವ್. ರಾಜೇಗೌಡ ಇತರರು ಪಾಲ್ಗೊಂಡಿದ್ದರು.