×
Ad

ನಮ್ಮ ಮೆಟ್ರೊ ಯೋಜನೆ ಎಪ್ರಿಲ್‌ನಲ್ಲಿ ಕಾರ್ಯಾರಂಭ: ಸಿಎಂ ಸಿದ್ದರಾಮಯ್ಯ

Update: 2016-09-14 23:40 IST

ಬೆಂಗಳೂರು, ಸೆ.14: ನಮ್ಮ ಮೆಟ್ರೊ ರೈಲು ಯೋಜನೆಯ ಮೊದಲನೆ ಹಂತದ ಸುರಂಗ ಮಾರ್ಗ ಸೇರಿದಂತೆ ಇನ್ನಿತರ ಕಾಮಗಾರಿಗಳು ಮಾರ್ಚ್‌ವರೆಗೆ ಪೂರೈಸಿ, ಎಪ್ರಿಲ್‌ನಿಂದ ಪೂರ್ಣಪ್ರಮಾಣದ ಮೆಟ್ರೊ ರೈಲು ಸಂಚಾರ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಮ್ಮ ಮೆಟ್ರೊ ರೈಲು ನಿಗಮದ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲನೆ ಹಂತದ 42 ಕಿ.ಮೀ. ಪೈಕಿ, 11 ಕಿ.ಮೀ. ಹೊರತುಪಡಿಸಿ 29 ಕಿ.ಮೀ. ಈಗಾಗಲೇ ಮೆಟ್ರೊ ಸಂಚಾರಕ್ಕೆ ಸಮರ್ಪಿತವಾಗಿದೆ ಎಂದರು.
11 ಕಿ.ಮೀ. ಮಾರ್ಗದಲ್ಲಿ ನಾಲ್ಕು ಕಿ.ಮೀ. ಸುರಂಗಮಾರ್ಗವಿದೆ. ಇದರಲ್ಲಿ ಕೇವಲ 15 ಮೀಟರ್ ಕಾಮಗಾರಿಗಳು ಮಾತ್ರ ಬಾಕಿಯಿದೆ. ಹಳಿ ಅಳವಡಿಕೆ, ವಿದ್ಯುತ್ ಸಂಪರ್ಕ, ಪ್ರಾಯೋಗಿಕ ಸಂಚಾರ ಎಲ್ಲವೂ ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳುತ್ತವೆ. ಎಪ್ರಿಲ್ ಮೊದಲ ಹಂತದ 13,800 ಕೋಟಿ ರೂ.ವೆಚ್ಚದ ಈ ಮಾರ್ಗವು ಕಾರ್ಯಾಚರಣೆಗೆ ಮುಕ್ತವಾಗಲಿದೆ ಎಂದು ಅವರು ಹೇಳಿದರು.

ಪ್ರಸ್ತುತ ಮೆಟ್ರೋದಲ್ಲಿ ಪ್ರತಿದಿನ ಸರಾಸರಿ 1.8 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಮೊದಲ ಹಂತದ ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದಲ್ಲಿ, ಪ್ರತಿ ದಿನ 5 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು. ನಮ್ಮ ಮೆಟ್ರೊ ದ ಎರಡನೆ ಹಂತದ 72 ಕಿ.ಮೀ. ಕಾಮಗಾರಿಗಳೂ ಪ್ರಗತಿಯಲ್ಲಿವೆ. ಮೈಸೂರು ರಸ್ತೆಯಿಂದ ಕೆಂಗೇರಿಯವರೆಗೆ ಹಾಗೂ ಕನಕಪುರ ರಸ್ತೆಯಿಂದ ನೈಸ್ ರಸ್ತೆಯ ಕೂಡು ರಸ್ತೆಯವರೆಗೆ ಈಗಾಗಲೇ ಕಾಮಗಾರಿಗಳು ಪ್ರಾರಂಭವಾಗಿವೆ. ಎಲೆಕ್ಟ್ರಾನಿಕ್ಸ್ ಸಿಟಿಯಿಂದ ವೈಟ್‌ಫೀಲ್ಡ್ ವರೆಗಿನ 16 ಕಿ.ಮೀ. ಮಾರ್ಗಕ್ಕೆ ಮಾಸಾಂತ್ಯದೊಳಗೆ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಎರಡನೆ ಹಂತದ ಯೋಜನೆಗೆ 26,400 ಕೋಟಿ ರೂ.ವೆಚ್ಚವಾಗಲಿದೆ.ಇದರಲ್ಲಿ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ತಲಾ ಶೇ.20ರಷ್ಟು ವೆಚ್ಚವನ್ನು ಭರಿಸಲಿವೆ. ಉಳಿದ ಶೇ.60ರಷ್ಟು ಮೊತ್ತವನ್ನು ಬೆಂಗಳೂರು ಮೆಟ್ರೊ ರೈಲು ನಿಗಮವು ಸಂಪನ್ಮೂಲ ಕ್ರೋಡೀಕರಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಇದರ ಜೊತೆಗೆ, ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಕೃಷ್ಣರಾಜಪುರಂವರೆಗೆ 18 ಕಿ.ಮೀ. ನಮ್ಮ ಮೆಟ್ರೋ ಎರಡನೆ ಹಂತದ ‘ಎ’ ಭಾಗ ಎಂದು ಆದ್ಯತೆಯ ಮೇರೆಗೆ ರೂಪಿಸಿ, 3,500 ಕೋಟಿ ರೂ.ಹೆಚ್ಚುವರಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅ.20ರೊಳಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಅಲ್ಲದೆ, ಯೋಜನಾ ಅನುಷ್ಠಾನಕ್ಕೆ ಅಗತ್ಯವಿರುವ ವೆಚ್ಚವನ್ನು ಮೆಟ್ರೊ ಸ್ವಾಮ್ಯದಲ್ಲಿರುವ ಭೂಮಿ ಹರಾಜು, ನೂತನ ಆರ್ಥಿಕ ತಂತ್ರಗಳು ಹಾಗೂ ಸಾಲ ಪಡೆಯುವ ಮೂಲಕ ಸಂಪನ್ಮೂಲವನ್ನು ಕ್ರೋಢೀರಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಮ್ಮ ಮೆಟ್ರೋ ಎರಡನೆ ಹಂತವು 2020 ಇಸವಿಯ ವೇಳೆಗೆ ಪೂರ್ಣಗೊಳ್ಳಲಿವೆ. ಆದರೆ, ಎರಡನೆ ಹಂತದ ‘ಎ’ ಭಾಗದ ಈ ಯೋಜನೆಯನ್ನು ಮೊದಲನೆ ಹಂತದ ಅನುಭವದ ಆಧಾರದ ಮೇರೆಗೆ ಎರಡು ವರ್ಷಗಳ ಮುನ್ನವೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಮೆಟ್ರೋ ಎರಡನೆ ಹಂತವು ಅನುಷ್ಠಾನಗೊಂಡಲ್ಲಿ ಪ್ರತಿದಿನ 15 ಲಕ್ಷ ಪ್ರಯಾಣಿಕರು ಸಂಚರಿಸಲು ಅನುಕೂಲವಾಗಲಿದೆ. ಇದರಿಂದ ಬೆಂಗಳೂರಿನ ಸಂಚಾರದಟ್ಟಣೆಯು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅವರು ಹೇಳಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ರೈಟ್ಸ್ ಸಂಸ್ಥೆಯು ಒಂಬತ್ತು ಪರ್ಯಾಯ ಮಾರ್ಗಗಳನ್ನು ಗುರುತಿಸಿದೆ. ಸಾರ್ವಜನಿಕರ ಪ್ರತಿಕ್ರಿಯೆ ಪಡೆಯಲು ಈ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಸಾರ್ವಜನಿಕ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಅಲ್ಲದೆ, ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ 1,800 ಕೋಟಿ ರೂ.ವೆಚ್ಚದಲ್ಲಿ ಉಕ್ಕಿನ ಮೇಲ್ಸೇತುವೆ(ಸ್ಟೀಲ್ ಬ್ರಿಡ್ಜ್) ರಸ್ತೆ ನಿರ್ಮಾಣದ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಅಕ್ಟೋಬರ್‌ನಲ್ಲಿ ಸೇತುವೆ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ವಿವರಿಸಿದರು.
ಸಚಿವರಾದ ಕಾಗೋಡು ತಿಮ್ಮಪ್ಪ, ಡಾ.ಜಿ.ಪರಮೇಶ್ವರ್, ಎಂ. ಕೃಷ್ಣಪ್ಪ, ಎಚ್.ಆಂಜನೇಯ, ರಮಾನಾಥ ರೈ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಶಾಸಕರಾದ ಮುನಿರತ್ನ, ಎಸ್.ಟಿ.ಸೋಮಶೇಖರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್, ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News