ಕಾವೇರಿ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಪ್ರಧಾನಿ ಹಿಂದೇಟು: ದೇಶಪಾಂಡೆ
ಬೆಂಗಳೂರು, ಸೆ.14: ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಉದ್ಭವಿಸಿರುವ ಕಾವೇರಿ ಜಲವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸಲು ಪ್ರಧಾನಿ ನರೇಂದ್ರಮೋದಿ ಹಿಂದೇಟು ಹಾಕುತ್ತಿದ್ದಾರೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಟೀಕಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣಾದಲ್ಲಿ ಎಂಸಿಎ(ಮಾರ್ಕೆಟಿಂಗ್ ಕಮ್ಯೂನಿಕೇಶನ್ ಆ್ಯಂಡ್ ಅಡ್ವರ್ಟೈಸರ್ ಲಿಮಿಟೆಡ್) ಸಂಸ್ಥೆ ವತಿಯಿಂದ ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಒಂದು ಕೋಟಿ ರೂ.ಮೊತ್ತದ ಚೆಕ್ ಹಸ್ತಾಂತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾವೇರಿ ವಿವಾದವನ್ನು ಕಾನೂನಿನ ಮೂಲಕವೇ ಬಗೆಹರಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರಮೋದಿ ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದೇಶಪಾಂಡೆ, ಕಾನೂನು ಮೂಲಕ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳುವುದು ಸಾಮಾನ್ಯ ಬೆಳವಣಿಗೆ. ಉಭಯ ರಾಜ್ಯಗಳ ನಡುವೆ ಸಂಧಾನ ಮಾಡಿಸಿ ಸಮಸ್ಯೆ ಬಗೆಹರಿಸಲು ಪ್ರಧಾನಿ ಪ್ರಯತ್ನವನ್ನೇ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಕ್ಕೂಟ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಪ್ರಧಾನಮಂತ್ರಿ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಧ್ಯಪ್ರವೇಶಿಸಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು. ಆದರೆ, ನರೇಂದ್ರಮೋದಿ ಈ ನಿಟ್ಟಿನಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ದೇಶಪಾಂಡೆ ಆರೋಪಿಸಿದರು.
ಕಾವೇರಿ ವಿವಾದ ಹಿನ್ನೆಲೆಯಲ್ಲಿ ಪದೇ ಪದೇ ನಡೆಯುತ್ತಿರುವ ಬಂದ್ ಹಾಗೂ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಜನ ಜೀವನ ಹಾಗೂ ಕೈಗಾರಿಕೆಗಳು ಭಾರೀ ನಷ್ಟ ಅನುಭವಿಸುವಂತಾಗಿದೆ. ಕುಡಿಯುವ ನೀರಿನ ವಿಚಾರವು ಅತ್ಯಂತ ಸೂಕ್ಷ್ಮವಾದದ್ದು, ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಬೆಂಗಳೂರು ಕೇವಲ ರಾಜ್ಯದ ರಾಜಧಾನಿಯಾಗಿ ಮಾತ್ರ ಗುರುತಿಸಿಕೊಳ್ಳುತ್ತಿಲ್ಲ. ವಿಶ್ವಮಟ್ಟದಲ್ಲಿ ತನ್ನದೇ ಆದ ವಿಶಿಷ್ಟತೆಯಿಂದ ಗುರುತಿಸಲ್ಪಡುವ ನಗರವಾಗಿದೆ. ಪದೇ ಪದೇ ಬಂದ್‌ಗಳು ನಡೆಯುತ್ತಿರುವುದರಿಂದ ಕೈಗಾರಿಕೆಗಳಿಗೆ ಭಾರೀ ಪ್ರಮಾಣದಲ್ಲಿ ನಷ್ಟವುಂಟಾಗಿದೆ. ಆದುದರಿಂದ, ಕೈಗಾರಿಕೋದ್ಯಮಿಗಳ ಕ್ಷಮೆ ಕೋರುತ್ತೇನೆ ಎಂದು ಅವರು ಹೇಳಿದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಕಾನೂನಿನ ಹಾದಿಯಲ್ಲಿ ಹೋರಾಟ ಮಾಡಬೇಕು. ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡುವುದು ಸರಿಯಲ್ಲ. ಸರಕಾರವು ರಾಜ್ಯದ ಹಿತಾಸಕ್ತಿ ಕಾಪಾಡಲು ಸರ್ವಪ್ರಯತ್ನಗಳನ್ನು ಮಾಡುತ್ತಿದೆ ಎಂದು ದೇಶಪಾಂಡೆ ತಿಳಿಸಿದರು.
ಕಾವೇರಿ ವಿಚಾರದಲ್ಲಿ ಸಾರ್ವಜನಿಕರು ಶಾಂತಿಯಿಂದ ವರ್ತಿಸಬೇಕು. ಮೊನ್ನೆ ಕಾನೂನು ಸುವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುವ ರೀತಿಯಲ್ಲಿ ನಡೆದ ಘಟನೆ ಗಳಿಂದಾಗಿ ಮನಸ್ಸಿಗೆ ನೋವಾಗಿದೆ. ವಾಹನಗಳನ್ನು ಸುಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ದೇಶಪಾಂಡೆ ತಿಳಿಸಿದರು.
ಎಂಸಿಎ ಕಂಪೆನಿಗೆ ಪ್ರಸಕ್ತ ಸಾಲಿನಲ್ಲಿ 12 ಕೋಟಿ ರೂ.ಲಾಭವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ರೂ.ದೇಣಿಗೆ ನೀಡಲಾಗಿದೆ. ಈ ಹಣದಿಂದ ಬಡವರಿಗೆ ಸಹಾಯ ಆಗಬೇಕು ಎಂಬುದು ನಮ್ಮ ಉದ್ದೇಶ ಎಂದು ದೇಶಪಾಂಡೆ ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಿ.ವಿ.ಪ್ರಸಾದ್, ಎಂಸಿಎ ನಿರ್ದೇಶಕ ಪ್ರಕಾಶ್, ಬಾಲರಾಜ್, ಎಲ್.ಎನ್.ಮೂರ್ತಿ ಮತ್ತಿತರರು ಪಸ್ಥಿತರಿದ್ದರು.