ಕಾವೇರಿ ನದಿ ನೀರು ವಿವಾದ; ಅಲ್ಲಲ್ಲಿ ರೈಲು ತಡೆಗೆ ಯತ್ನ

Update: 2016-09-15 05:04 GMT

ಬೆಂಗಳೂರು, ಸೆ.15: ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಲ್‌ ನಾಗರಾಜ ಅವರು ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು  ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಇಂದು  ರೈಲ್ವೆ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ  ಅಲ್ಲಲ್ಲಿ ರೈಲು ತಡೆ ಯತ್ನ ನಡೆದಿದೆ. 
ರೈಲು ತಡೆ ಕರೆಯ ಹಿನ್ನೆಲೆಯಲ್ಲಿ  ರೈಲು  ನಿಲ್ದಾಣಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

 ರೈಲ್ವೇ ವಿಶೇಷ ಭದ್ರತಾ ಪಡೆಗಳು, ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್, ಸಶಸ್ತ್ರ ಸೀಮಾಬಲ ದಳ, ಇಂಡೋ-ಟಿಬೆಟ್ ಭದ್ರತಾ ಪಡೆಗಳು, ತುರ್ತು  ಪ್ರಹಾರ ದಳ ಹಾಗೂ ಅಶ್ರುವಾಯು ದಳಗಳನ್ನು ರೈಲ್ವೇ ನಿಲ್ದಾಣಗಳಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.

ಬೆಂಗಳೂರು , ಮೈಸೂರಿನಲ್ಲಿ ರೈಲು ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ರೈಲುಗಳು ಎಂದಿನಂತೆ ಓಡಾಟ ನಡೆಸುತ್ತಿದೆ.ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲೂ ರೈಲು ಸಂಚಾರ ಅಭಾದಿತವಾಗಿದೆ. 
ಮಂಡ್ಯ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸುತ್ತಿದ್ದ ಕದಂಬ ಸೇನೆಯ  ಆರು ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಶಿವಮೊಗ್ಗದಲ್ಲಿ ಕರವೇ ಕಾರ್ಯಕರ್ತರು ರೈಲು ತಡೆಗೆ ವಿಫಲ ಯತ್ನ ನಡೆಸಿದ್ದಾರೆ. ಧಾರವಾಡದಲ್ಲೂ ರೈಲು ನಿಲ್ದಾಣಕ್ಕೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು  ನುಗ್ಗಲು  ವಿಫಲ ಯತ್ನ ನಡೆಸಿದ್ದಾರೆಂದು ತಿಳಿದು ಬಂದಿದೆ. 
ತಮಿಳುನಾಡು ಬಂದ್‌ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಅಹಿತರ ಘಟನೆ ನಡೆಯುವುದನ್ನು ತಪ್ಪಿಸಲು ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News