×
Ad

ಕಾವೇರಿ ನೀರಿನ ಹೆಸರಲ್ಲಿ ನಡೆದ ಹಿಂಸೆಯಿಂದ ಲಕ್ಷಗಟ್ಟಲೆ ಲೀಟರ್ ನೀರು ಹಾಳು

Update: 2016-09-15 11:52 IST

ಬೆಂಗಳೂರು, ಸೆ.15: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಭುಗಿದೆದ್ದ ಹಿಂಸಾಚಾರದಲ್ಲಿ ಹಲವಾರು ವಾಹನಗಳು ಬೆಂಕಿಗಾಹುತಿಯಾದವು. ಆದರೆ ಈ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳಸುಮಾರು 2.7 ಲಕ್ಷ ಲೀಟರ್ ನೀರನ್ನು ಸುರಿಯಬೇಕಾಗಿ ಬಂದಿದ್ದು ವಿಪರ್ಯಾಸವೇ ಸರಿ.
ನಗರದಲ್ಲಿ ಸುಮಾರು 30 ಟ್ರಕ್ಕುಗಳೂ ಸೇರಿದಂತೆ ಹಲವು ಬಸ್ಸುಗಳು ಹಾಗೂ ಇತರ ವಾಹನಗಳು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿದ್ದರೆ, ಅವುಗಳಿಗೆ ಹತ್ತಿದ್ದ ಬೆಂಕಿಯನ್ನು ನಂದಿಸಲು ನಗರದ 50 ಅಗ್ನಿಶಾಮಕ ವಾಹನಗಳು, 400 ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿ ಸಾಕಾಗದೆ ಬೀದರ್, ವಿಜಯಪುರ ಹಾಗೂ ಬೆಳಗಾವಿಯಿಂದ ಅಗ್ನಿಶಾಮಕ ವಾಹನಗಳು ಹಾಗೂ ಸುಮಾರು 150 ಹೆಚ್ಚುವರಿ ಸಿಬ್ಬಂದಿಯನ್ನು ತರಿಸಬೇಕಾಗಿ ಬಂದಿತ್ತು.
ಈಗಲೂ ನಗರದ ಹಲವು ಪ್ರದೇಶಗಳಾದ ನಾಗರಬಾವಿ, ಹೆಬ್ಬಾಳ ಹಾಗೂ ಯಲಹಂಕಸಹಿತ ಸುಮಾರು 30 ಕಡೆ ಅಗ್ನಿಶಾಮಕ ವಾಹನಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಸುಮಾರು 400 ಸಿಬ್ಬಂದಿ ಕಳೆದೆರಡು ದಿನಗಳಿಂದ ಅಹೋರಾತ್ರಿ ಎರಡು ಪಾಳಿಗಳಲ್ಲಿ ಈ ಸ್ಥಳಗಳಲ್ಲಿ ಕರ್ತವ್ಯದಲ್ಲಿದ್ದಾರೆ. ಅವರಿಗೆ ಇಲಾಖೆ ಆಹಾರ ಸಹಿತ ಎಲ್ಲಾ ಸೌಕರ್ಯಗಳನ್ನೂ ಸ್ಥಳದಲ್ಲೇ ಒದಗಿಸುತ್ತಿದೆ.
ಇತ್ತೀಚೇಗಿನ ಹಿಂಸಾಚಾರದ ಸಂದರ್ಭ ನಾಲ್ಕೈದು ಮಂದಿ ಅಗ್ನಿಶಾಮಕ ಸಿಬ್ಬಂದಿಗೆ ಕಾರ್ಯಾಚರಣೆ ವೇಳೆ ಸಣ್ಣ ಪುಟ್ಟ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News