ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಚಿಂತನೆ ಮೈಗೂಡಲಿ: ಪ್ರೊ. ಜೋಗನ್‌ಶಂಕರ್

Update: 2016-09-15 16:37 GMT

ತೀರ್ಥಹಳ್ಳಿ, ಸೆ.15: ವಿದ್ಯಾರ್ಥಿಗಳು ಜೀವನೋತ್ಸವ ಬೆಳೆಸಿಕೊಂಡರೆ ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯ. ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಕುರಿತು ವಿದ್ಯಾರ್ಥಿಗಳ ಮನಸ್ಸು ಸದಾ ಜಾಗೃತರಾಗಿರಬೇಕೆಂದು ಕುವೆಂಪು ವಿ.ವಿ. ಕುಲಪತಿ ಪ್ರೊ. ಜೋಗನ್ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗ ಮಂದಿರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜಮುಖಿ ಚಿಂತನೆಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಒಳಿತು, ಕೆಡುಕುಗಳ ಕುರಿತು ಚಿಂತಿಸುವ ಮನಸ್ಸು ವಿದ್ಯಾರ್ಥಿಗಳಲ್ಲಿರಬೇಕು. ಶಿಕ್ಷಣ, ಸಾಮಾಜಿಕ ಸಂಬಂಧ, ಆರೋಗ್ಯ ಕ್ಷೇತ್ರಗಳ ಬಗ್ಗೆ ಅರಿತುಕೊಳ್ಳುವ ಅಗತ್ಯತೆ ಮನಗಾಣಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ರೂಪಿಸಿಕೊಳ್ಳುವ ವ್ಯಕ್ತಿತ್ವ ಭವಿಷ್ಯಕ್ಕೆ ಮಾರ್ಗವಾಗಲಿದೆ ಎಂದರು.

ತಂತ್ರಜ್ಞಾನ ಬೆಳೆದಂತೆ ಶಿಕ್ಷಣದ ಪ್ರಗತಿಯು ಆಗುತ್ತಿದ್ದು, ಕೇವಲ 4 ಗೋಡೆಗಳ ನಡುವೆ ಪಾಠ ಕೇಳಿದರೆ ಸಾಲದು. ಪ್ರಪಂಚದ ಆಗು-ಹೋಗುಗಳ ವಿಚಾರಗಳ ಬಗ್ಗೆ ತಿಳಿದುಕೊಂಡು ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವುದು ಬೆಳೆದುಬಂದ ಅತ್ಯುತ್ತಮ ಪರಂಪರೆ. ಸಾಧನೆ ಮಾಡಿದ ಪ್ರತಿಭಾವಂತರು ದೇಶದ ಆಸ್ತಿಯಾಗಲಿ ಎಂದು ಶುಭ ಹಾರೈಸಿದರು.

 ಇದೇ ಸಂದರ್ಭ ಕುಲಪತಿ ಜೋಗನ್‌ಶಂಕರ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.

 ಕಾಲೇಜು ಪ್ರಾಚಾರ್ಯ ಡಾ. ಪಿ.ದೇವರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿಸಮಿತಿ ಕಾರ್ಯಾಧ್ಯಕ್ಷ ಕೂಳೂರು ಸತ್ಯನಾರಾಯಣರಾವ್, ಸದಸ್ಯ ಬಿ.ಟಿ. ಚಂದ್ರಪ್ಪಗೌಡ ಮಾತನಾಡಿದರು.

ಡಾ. ಎ.ಸಿ. ನಾಗೇಶ್ ಸ್ವಾಗತಿಸಿ, ಎಂ.ಆರ್. ಹರೀಶ್ ನಿರೂಪಿಸಿ, ಪ್ರೊ. ಬಿ.ಎಚ್. ವಾಸಪ್ಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News