×
Ad

ಸಮಾಜದ ಮುಖ್ಯವಾಹಿನಿಗೆ ಬನಿ: ಮುಸ್ಲಿಮರಿಗೆ ಸಚಿವ ತನ್ವೀರ್ ಸೇಠ್ ಕರೆ

Update: 2016-09-15 22:09 IST

ತರೀಕೆರೆ, ಸೆ.15: ಮುಸ್ಲಿಮರು ಒಗ್ಗಟ್ಟಿನಿಂದ ಕೂಡಿ ಸಮಾಜವನ್ನು ಪರಿವರ್ತನೆ ಮಾಡುವ ಕಾರ್ಯದಲ್ಲಿ ತೊಡಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಪ್ರಾಥಮಿಕ ಶಿಕ್ಷಣ, ವಕ್ಫ್ ಮತ್ತು ಅಲ್ಪಸಂಖ್ಯಾತರ ನಿಗಮ ಸಚಿವ ತನ್ವೀರ್ ಸೇಠ್ ತಿಳಿಸಿದರು.

ಅವರು ಪಟ್ಟಣದ ಎಂಜಿ ಹಾಲ್‌ನಲ್ಲಿ ಮುಸಲ್ಮಾನರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮುಸ್ಲಿಮರು ಶಿಕ್ಷಣಕ್ಕೆ ಪ್ರಾತಿನಿಧ್ಯತೆ ನೀಡಬೇಕು. ಬದಲಾಗುತ್ತಿರುವ ಆಧುನಿಕತೆಗೆ ಮಕ್ಕಳನ್ನು ಸಜ್ಜುಗೊಳಿಸಿ ಅವರನ್ನು ಅವರ ಕ್ಷೇತ್ರದಲ್ಲಿ ದೃಢವಾಗಿ ನಿಲ್ಲಿಸುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ. ಬಡವ ಶ್ರೀಮಂತರ ನಡುವೆ ಸಮಾನತೆ ತರುವ ಉದ್ದೇಶದಿಂದ ಸರಕಾರ ಆರ್ಥಿಕ ನೆರವನ್ನು ನೀಡುತ್ತಿದೆ. ರಾಜ್ಯ ಸರಕಾರ ಮಸೀದಿ ಅಭಿವೃದ್ಧಿ ಸಮಸ್ಯೆಗಳ ಬಗ್ಗೆ ಪರಿಹಾರಕ್ಕೆ ಸಾಧ್ಯವಾದಷ್ಟು ಸಹಾಯ ಹಸ್ತ ನೀಡುತ್ತಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವಲ್ಲಿ ಆದ್ಯತೆ ನೀಡುತ್ತಿದೆ. ಇದರ ಲಾಭ ಪಡೆದು ಜನತೆ ಪ್ರಗತಿಯತ್ತ್ತ ಸಾಗಬೇಕೆಂದರು. ಮುಸ್ಲಿಮರ ಬೇಡಿಕೆಗಳನ್ನು ಆದಷ್ಟು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು. ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಮುಸಲ್ಮಾನರು ವಾಸಿಸುವ ಸ್ಥಳಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಅವರ ಬೆಳವಣಿಗೆಗೆ ಬೇಕಾದ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ವಿಧವೆಯರು, ವೃದ್ಧರಿಗೆ ಅವರ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ. ಕೌಶಲ್ಯ ಯೋಜನೆಯಡಿ ಮುಸಲ್ಮಾನರಿಗೆ ಆರ್ಥಿಕ ನೆರವನ್ನು ನೀಡಿ ಸದೃಢರನ್ನಾಗಿ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಅದರ ಲಾಭ ಪಡೆದು ಅಭಿವೃದ್ಧಿ ಹೊಂದಬೇಕೆಂದರು. ಉಮರ್ ಫಾರೂಕ್ ಪ್ರಾಸ್ತಾವಿಕವಾಗಿ ಮಾತನಾಡಿದ, ಮಸೀದಿ ರಿಜಿಸ್ಟ್ರೇಷನ್ ಸಮಸ್ಯೆ, ಮದರಸಗಳ ಸಮಸ್ಯೆ, ವಕ್ಫ್‌ಬೋರ್ಡ್‌ನಿಂದ ಆಗುತ್ತಿರುವ ವಿಳಂಬ ನೀತಿ, ಮುಗ್ಧ ಮುಸಲ್ಮಾನರಿಗೆ ಸಿಗಬೇಕಾದ ಸವಲತ್ತಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳ ಬಗ್ಗೆ ಸಚಿವರ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಸೀದಿಯ ಹಿರಿಯ ಸಮಾಜದ ಗಣ್ಯರು ಸಚಿವ ತನ್ವಿರ್ ಸೇಠ್ ಹಾಗೂ ಶಾಸಕ ಜಿ.ಎಚ್.ಶ್ರೀನಿವಾಸ್ ರವರಿಗೆ ಸನ್ಮಾನಿಸಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News