ವಲಯ ಮಟ್ಟದ ಪ್ರತಿಭಾ ಕಾರಂಜಿ

Update: 2016-09-15 16:42 GMT

ಚಿಕ್ಕಮಗಳೂರು ಸೆ.15: ನಗರದ ಸೈಂಟ್ ಮೇರಿಸ್ ಶಾಲೆಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.

 ಕಾರ್ಯಕ್ರಮವನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮು ಉದ್ಘಾಟಿಸಿ ಮಾತನಾಡಿ, ಪ್ರತಿಭಾ ಕಾರಂಜಿಯ ಹುಟ್ಟು ಚಿಕ್ಕಮಗಳೂರು ಜಿಲ್ಲೆಯಾಗಿರುವುದು ಹೆಮ್ಮೆಯ ಸಂಗತಿ. ಮೊಟ್ಟ ಮೊದಲ ಬಾರಿಗೆ ಕೊಪ್ಪದಲ್ಲಿ ಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡರು ಮಕ್ಕಳ ಮೇಳ ಎಂಬ ಕಾರ್ಯಕ್ರಮವನ್ನು ಮಾಡಿದರು. ಅದೇ ಕಾರ್ಯಕ್ರಮ ಕ್ರಮೇಣ ಸ್ವಲ್ಪ ಬದಲಾವಣೆಗೊಂಡು ಪ್ರತಿಭಾ ಕಾರಂಜಿಯಾಗಿ ರೂಪುಗೊಂಡು ಇಂದು ರಾಜ್ಯ, ರಾಷ್ಟ್ರಮಟ್ಟದ ಮನ್ನಣೆ ಪಡೆಯುತ್ತಿದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.

ನಗರಸಭಾ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ದೇವರಾಜ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿಸೆಯಿಂದಲೇ ಉತ್ತಮ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಅವುಗಳನ್ನು ಇಂತಹ ವೇದಿಕೆಗಳ ಮೂಲಕ ಕಾರ್ಯರೂಪಕ್ಕೆ ತರಬೇಕು. ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವುದರ ಮೂಲಕ ಸ್ವಚ್ಛ ಭಾರತ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದರು.

ಪ್ರತಿಭಾ ಕಾರಂಜಿಯ ನೋಡಲ್ ಅಧಿಕಾರಿ ಹಾಗೂ ವಿಜ್ಞಾನ ವಿಷಯ ಪರಿವೀಕ್ಷಕ ರವೀಶ್. ಎಚ್.ಸಿ., ಅಧ್ಯಕ್ಷತೆ ವಹಿಸಿದ್ದ ಸೈಂಟ್ ಮೇರಿಸ್ ಶಾಲಾ ಸಂಸ್ಥಾಪಕ ಜೆರಾಲ್ಡ್ ಲೋಬೋ ಮಾತನಾಡಿದರು.

   ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಉಮಾ ಮಹೇಶ್ವರಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ್ ಮತ್ತು ಪೌಢಶಾಲಾ ಶಿಕ್ಷಕರ ಸಂಘದ ಖಜಾಂಚಿ ಕಲ್ಲೇಶ್ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಧ್ಯಾಯ ಉತ್ತಮ್ ಟಿ.ಎಲ್. ಸ್ವಾಗತಿಸಿದರು. ಸಹ ಶಿಕ್ಷಕಿ ಅನುಸೂಯಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News