ಗರ್ಭಿಣಿಯರಿಗೆ ಉಚಿತ ತಪಾಸಣೆ: ಜಿಲ್ಲಾಧಿಕಾರಿ

Update: 2016-09-15 16:44 GMT

 ದಾವಣಗೆರೆ, ಸೆ.15: ಗರ್ಭಿಣಿಯರಿಗೆ ಪ್ರತೀ ತಿಂಗಳ 9ರಂದು ಉಚಿತ ತಪಾಸಣೆ, ಚಿಕಿತ್ಸೆ ಮತ್ತು ಅಲ್ಟ್ರಾಸೌಂಡ್ ಸ್ಕಾನಿಂಗ್ ನಡೆಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳಲ್ಲಿ ಖಾಸಗಿ ವಲಯದ ಸಹಭಾಗಿತ್ವ ಮತ್ತು ಪಿಸಿ ಮತ್ತು ಪಿಎನ್‌ಡಿಟಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಆರ್‌ಸಿಎಚ್ ಅಧಿಕಾರಿ ಡಾ. ಶಿವಕುಮಾರ್ ಮಾತನಾಡಿ, ಪ್ರಧಾನ ಮಂತ್ರಿ ಸುರಕ್ಷಾ ಅಭಿಯಾನ ಕಾರ್ಯಕ್ರಮದಡಿ ಗರ್ಭಿಣಿಯರಿಗೆ ಪ್ರತೀ ತಿಂಗಳ 9ರಂದು ಉಚಿತ ಪರೀಕ್ಷೆ, ಚಿಕಿತ್ಸೆ ಮತ್ತು ಸ್ಕಾನಿಂಗ್ ಮಾಡಲಾಗುವುದು. ಸರಕಾರಿ ಆಸ್ಪತ್ರೆಯಲ್ಲಿ ಲಭ್ಯವಿರುವ ಸ್ಕಾನಿಂಗ್ ಮೆಷಿನ್‌ಗಳಿಂದ ಎಲ್ಲರಿಗೂ ಸೌಲಭ್ಯ ನೀಡುವುದು ಕಷ್ಟವಾಗುವುದರಿಂದ ಖಾಸಗಿ ನರ್ಸಿಂಗ್ ಹೋಂಗಳು ಅಂದು ಉಚಿತವಾಗಿ ಗರ್ಭಿಣಿಯರಿಗೆ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್ ಸ್ಕಾನಿಂಗ್ ಸೌಲಭ್ಯ ನೀಡಿದಲ್ಲಿ ತುಂಬಾ ಅನುಕೂಲ ಎಂದು ಚರ್ಚೆಯ ಬಳಿಕ ಸಭೆೆಯು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿತು.

ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್‌ಮೆಂಟನ್ನು ಪ್ರಸ್ತುತ ಶಿವಮೊಗ್ಗದ ಸಂಸ್ಥೆಯಿಂದ ನಿಯಮಾನುಸಾರ ನಿರ್ವಹಿಸಲಾಗುತ್ತಿದ್ದು, ಇದು ತುಂಬಾ ದುಬಾರಿಯಾಗಿದೆ. ಮಾಲಿನ್ಯ ಮಂಡಳಿಯೊಂದಿಗೆ ಚರ್ಚಿಸಿ ದಾವಣಗೆರೆಯಲ್ಲೇ ಸ್ಥಳ ದೊರೆತು ಘಟಕ ಸ್ಥಾಪಿಸಿದಲ್ಲಿ ಅನುಕೂಲವಾಗುತ್ತದೆ. ಬಾಪೂಜಿ ಸಂಸ್ಥೆಯವರು ಈ ಬಗ್ಗೆ ಯೋಚಿಸಬಹುದೆಂದು ಐಎಂಎ ಅಧ್ಯಕ್ಷ ಡಾ. ನರೇಂದ್ರ ಸಲಹೆ ನೀಡಿದರು.

ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಬಾಪೂಜಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಈ ಕುರಿತು ಮಾತನಾಡುತ್ತೇನೆಂದರು.

ಎಚ್‌ಎಂಐಎಸ್ ವರದಿಯನ್ನು ಖಾಸಗಿಯವರು ನೀಡುತ್ತಿಲ್ಲವೆಂಬ ಪ್ರಸ್ತಾಪ ಬಂದಾಗ, ಖಾಸಗಿ ನರ್ಸಿಂಗ್ ಹೋಂನವರು ನಮಗಿನ್ನೂ ಅದನ್ನು ನೀಡಿಲ್ಲ. ಒದಗಿಸಿದ ನಂತರ ನೀಡುತ್ತೇವೆ. ಜನನ ಮರಣ ನೋಂದಣಿ ನಿಯಮಾನುಸಾರ ಮಾಡುತ್ತಿದ್ದೇವೆ ಎಂದರು. ಆರ್‌ಸಿಎಚ್ ಅಧಿಕಾರಿ ಎಚ್ಎಂಐಎಸ್ ನಮೂನೆ ಎಲ್ಲರಿಗೂ ನೀಡಿ ಪ್ರತೀ ತಿಂಗಳ ಅಂತ್ಯದಲ್ಲಿ ತಾಲೂಕು ವೈದ್ಯಾಧಿಕಾರಿಗೆ ನೀಡಬೇಕೆಂದರು.

ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಒಂದು ದಿನ ನಿಗದಿಪಡಿಸಿ ಎಲ್ಲ ನರ್ಸಿಂಗ್ ಹೋಂಗಳಲ್ಲಿ ಇದಕ್ಕೆಂದೇ ನಿಯೋಜಿಸಿದ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿ ಕೆಲಸ ನಿರ್ವಹಿಸುವಂತೆ ತಿಳಿಸಿದರು. ಖಾಸಗಿ ಆಸ್ಪತ್ರೆಗಳಿಗೆ ಬರುವ ಹೈಪರ್‌ಟೆನ್ಶನ್, ಡಯಾಬಿಟಿಸ್, ಕ್ಯಾನ್ಸರ್‌ನಂತಹ ಹರಡದೇ ಇರುವ ರೋಗಗಳ ಅಂಕಿಅಂಶ ನೀಡಿದಲ್ಲಿ ಸರಕಾರದ ವತಿಯಿಂದ ಅಂತಹ ಪ್ರತಿ ರೋಗಿಗೆ ಎನ್ಸಿಡಿ ರೋಗಿ ಕಾರ್ಡ್ ಎನ್ನುವ ಒಂದು ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿದವರಿಗೆ ಉಚಿತ ಔಷಧ ನೀಡಲಾಗುವುದು. ಆದ್ದರಿಂದ ಖಾಸಗಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂಗಳು ಇಂತಹ ರೋಗಿಗಳ ಅಂಕಿ ಅಂಶ ತಪ್ಪದೇ ಪಿಎಚ್‌ಸಿ, ಸಿಎಚ್‌ಸಿ ಮತ್ತು ನಗರ ಆರೋಗ್ಯ ಕೇಂದ್ರಗಳಿಗೆ ನೀಡಬೇಕೆಂದು ಡಿಪಿಎಂಒ, ಡಿಎಚ್‌ಒ ತಿಳಿಸಿದಾಗ, ಖಾಸಗಿ ಆರೋಗ್ಯ ಸಂಸ್ಥೆಯವರು ನೀಡುವುದಾಗಿ ತಿಳಿಸಿದರು. ತಾಯಿ ಮತ್ತು ಶಿಶು ಮರಣದ ಆಡಿಟ್, ಎಚ್‌ಎಂಐಎಸ್, ಎಂಸಿಟಿಎಸ್, ತಾಯಿಕಾರ್ಡ್, ಎಂಟಿಪಿ, ಎಎನ್‌ಸಿ, ಕಾಪರ್-ಟಿ, ಓಟಿ ವಹಿ, ರೆಪರಲ್ ವಹಿಗಳು ಸೇರಿದಂತೆ ನಿರ್ವಹಿಸಲೇಬೇಕಾದ ಅತಿಮುಖ್ಯ ವರದಿಗಳನ್ನು ಖಾಸಗಿ ನರ್ಸಿಂಗ್ ಹೋಂಗಳು ನಿರ್ವಹಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಸರಕಾರಿ ಸಂಸ್ಥೆ ಮತ್ತು ಖಾಸಗಿಯವರ ಸಹಭಾಗಿತ್ವದೊಂದಿಗೆ ಕೆಲಸ ಮಾಡುವುದರೊಂದಿಗೆ ಸಹಕರಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಎಸ್.ತ್ರಿಪುಲಾಂಭ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಎಚ್.ಡಿ. ನೀಲಾಂಬಿಕೆ, ಐಎಂಎ ಅಧ್ಯಕ್ಷ ಡಾ. ನರೇಂದ್ರ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News