ಪಡಿತರ ವಿತರಣಾ ಅಂಗಡಿಯಲ್ಲೇ ಟೋಕನ್: ಸುಜಾತಾ

Update: 2016-09-15 16:46 GMT

ಅಂಕೋಲಾ, ಸೆ.15: ತಾಲೂಕಿನಾದ್ಯಂತ ಪಡಿತರ ಧಾನ್ಯ ವಿತರಣೆಗೆ ಅಳವಡಿಸಲಾದ ಟೋಕನ್ ವ್ಯವಸ್ಥೆಯಿಂದಾಗಿ ಜನರು ಪರದಾಡುವಂತಾಗಿದೆ. ಪ್ರತೀ ಪಡಿತರ ವಿತರಣಾ ಅಂಗಡಿಗಳಲ್ಲಿಯೇ ಟೋಕನ್ ನೀಡುವ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಇದು ಸಾಧ್ಯವಾಗದಿದ್ದರೆ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಸುಜಾತಾ ಗಾಂವಕರ ಅವರು ಆಹಾರ ನಿರೀಕ್ಷಕ ಗಿರೀಶ್ ಬಾನಾವಳಿ ಅವರಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಈ ಕುರಿತು ಅವರು ಮಾತನಾಡಿದರು. ಆಹಾರ ನಿರೀಕ್ಷಕ ಗಿರೀಶ್ ಬಾನಾವಳಿ ಮಾತನಾಡಿ, ಟೋಕನ್ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತಮ್ಮ ಆದೇಶದಂತೆ ಪ್ರತಿ ಪಡಿತರ ಧಾನ್ಯ ನೀಡುವ ಅಂಗಡಿಯಲ್ಲಿ ಟೋಕನ್ ವಿತರಿಸಲು ಖಾಸಗಿಯವರು ಮುಂದೆ ಬಂದರೆ ಅವರಿಗೆ ಅವಕಾಶ ಕಲ್ಪಿಸಲಾಗುವುದು. ಈ ಕೆಲಸಕ್ಕೆ ಸಾರ್ವಜನಿಕರಿಂದ ಯಾವುದೇ ಹಣ ಪಡೆಯುವಂತಿಲ್ಲ. ಒಂದು ಟೋಕನ್‌ಗೆ 8 ರೂ. ನಂತೆ ಸರಕಾರವೇ ಅವರಿಗೆ ವೆಚ್ಚ ಭರಿಸಲಿದೆ ಎಂದರು. ತಾಲೂಕು ಆಸ್ಪತ್ರೆಗೆ ಬಹು ವರ್ಷಗಳ ನಂತರ ಹೆರಿಗೆ ತಜ್ಞ ವೈದ್ಯರು ನೇಮಕಗೊಂಡಿದ್ದಾರೆ. ಆದರೆ ಇವರು ಮುಂಜಾನೆ ಬಂದು ಸಂಜೆ ತಮ್ಮ ಕರ್ತವ್ಯ ಮುಗಿದ ನಂತರ ಕಾರವಾರಕ್ಕೆ ತೆರಳುತ್ತಾರೆ. ಇದರಿಂದಾಗಿ ರಾತ್ರಿ ಸಮಯದಲ್ಲಿ ಹೆರಿಗೆಗೆ ಬರುವವರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಹೀಗಾಗಿ ಈ ವೈದ್ಯರು ಆಸ್ಪತ್ರೆ ಎದುರಿನ ವಸತಿ ಗೃಹದಲ್ಲಿಯೇ ವಾಸ್ತವ್ಯ ಮಾಡಬೇಕು ಎಂದು ಸುಜಾತಾ ಗಾಂವಕರ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ತರಕಾರಿ ಮತ್ತು ಮೀನು ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವುದರ ಜೊತೆಗೆ ಸಾರ್ವಜನಿಕ ಶೌಚಾಲಯದ ಬಗ್ಗೆಯೂ ಗಮನ ಹರಿಸಬೇಕು. ಪಟ್ಟಣ ವ್ಯಾಪ್ತಿಯ ಅಂಗಡಿಕಾರರು ಬಸ್ ನಿಲ್ದಾಣದ ಶೌಚಾಲಯವನ್ನೇ ಅವಲಂಬಿಸಿಕೊಳ್ಳುವಂತಾಗಿದೆ. ಹೀಗಾಗಿ ವಿವಿಧೆಡೆ ಶೌಚಾಲಯ ನಿರ್ಮಿಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಎನ್. ನಾಯ್ಕ ಅವರಿಗೆ ಸುಜಾತಾ ಗಾಂವಕರ ಹೇಳಿದರು.

ವಿವಿಧ ಇಲಾಖೆಗಳ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ತಾಪಂ ಕಾರ್ಯ ನಿರ್ವಹಣಾಧಿಕಾರಿ ವಿ.ಎನ್. ಮಹಾಲೆ, ತಾಪಂ ಉಪಾಧ್ಯಕ್ಷೆ ತುಳಸಿಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು. ತಾಪಂ ಪ್ರಭಾರಿ ಸಹಾಯಕ ನಿರ್ದೇಶಕ ಗಿರೀಶ ನಾಯಕ ನಿರ್ವಹಿಸಿದರು. ವಿವಿಧ ಇಲಾಖೆ ಯ ಅಧಿಕಾರಿಗಳು ಉಪಸ್ಥಿತರಿದ್ದರು.

 ಮುಂದಿನ ಕೆಡಿಪಿ ಸಭೆಯಲ್ಲಿ ಯಾವೊಬ್ಬ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧ ಪಟ್ಟ ವಿಷಯ ಚರ್ಚೆ ಯಾದರೂ ಕೆಲವೊಂದು ಇಲಾಖೆಗೆ ಸಂಬಂಧಿಸಿದ ಚರ್ಚೆಗಳು ಒಂದಕ್ಕೊಂದು ಸಂಬಂಧಪಟ್ಟಿರುತ್ತದೆ. ಆದ್ದರಿಂದ ಸಭೆಯಿಂದ ಹೊರಗಡೆ ಹೋಗುವಂತಿಲ್ಲ್ಲ. ಅಲ್ಲದೆ, ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಒಂದು ವೇಳೆ ಬೇಕಂತಲ್ಲೇ ತಪ್ಪಿಸಿಕೊಂಡ ಅಧಿಕಾರಿ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು

<

ತಾಪಂ ಅಧ್ಯಕ್ಷೆ ಸುಜಾತಾ ಟಿ. ಗಾಂವಕರ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News