×
Ad

ಎನ್‌ಐಎಯಿಂದ ವಿಚಾರಣೆ ಸಾಧ್ಯತೆ?

Update: 2016-09-15 22:23 IST

ಶಿವಮೊಗ್ಗ, ಸೆ. 15: ಶಿವಮೊಗ್ಗ ನಗರದಲ್ಲಿ ಬಾಂಗ್ಲಾದೇಶಕ್ಕೆ ಸೇರಿದ ಇಬ್ಬರು ಪ್ರಜೆಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ವರದಿಯಾಗಿದೆ. ಬಂಧಿತ ಬಾಂಗ್ಲಾದೇಶಿ ಪ್ರಜೆಗಳನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಸೇರಿದಂತೆ ಪ್ರಮುಖ ಗುಪ್ತಚರ ಏಜೆನ್ಸಿಗಳು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಬಂಧಿತರು: ಸೈಫುಲ್ಲಾ(27) ಹಾಗೂ ಮುಹಮ್ಮದ್ ಶಹಜಾನ್(47) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರು ಕಳೆದ ಮಂಗಳವಾರ ರಾತ್ರಿ ಶರಾವತಿ ನಗರದ ಬಳಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದರು. ಈ ಕುರಿತಂತೆ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ದೊಡ್ಡಪೇಟೆ ಠಾಣೆ ಪೊಲೀಸರು ಈ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆಯ ವೇಳೆ ಆರೋಪಿಗಳಿಬ್ಬರು ಬಾಂಗ್ಲಾದೇಶದವರೆಂಬುವುದು ಬೆಳಕಿಗೆ ಬಂದಿತ್ತು. ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ತಂಗಿದ್ದ ಮಾಹಿತಿ ಪೊಲೀಸರಿಗೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಆಧಾರ್ ಕಾರ್ಡ್ ಪತ್ತೆ: ಆರೋಪಿ ಶಹಜಾನ್ ಬಳಿ ಜಮಖಂಡಿಯ ವಿಳಾಸವಿರುವ ಆಧಾರ್ ಕಾರ್ಡ್ ಇರುವುದು ಪತ್ತೆಯಾಗಿದೆ. ಜೊತೆಗೆ ಮೊಬೈಲ್, ಸಿಮ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ. ನೆಲೆಸಿದ್ದರು: ಪೊಲೀಸರ ಪ್ರಾಥಮಿಕ ಹಂತದ ತನಿಖೆಯ ವೇಳೆ ಆರೋಪಿಗಳಿಬ್ಬರು ಹಲವು ವರ್ಷಗಳ ಹಿಂದೆಯೇ ಬಾಂಗ್ಲಾದೇಶದಿಂದ ಭಾರತಕ್ಕೆ ಆಗಮಿಸಿ ನೆಲೆಸಿರುವುದು ತಿಳಿದುಬಂದಿದೆ. ಎಲ್ಲೂ ನೆಲೆ ನಿಲ್ಲದ ಇವರು ಕೂಲಿ ಕೆಲಸ ಹುಡುಕಿಕೊಂಡು ಊರೂರು ಸುತ್ತುತ್ತಿದ್ದರು. ಅದೇ ರೀತಿ ಇವರಿಬ್ಬರು ಶಿವಮೊಗ್ಗಕ್ಕೆ ಆಗಮಿಸಿದ್ದರು ಎಂದು ಹೇಳಲಾಗಿದೆ. ಮಾಹಿತಿ ರವಾನೆ: ಈಗಾಗಲೇ ಈ ಇಬ್ಬರ ಬಗ್ಗೆ ರಾಜ್ಯ ಪೊಲೀಸ್ ಇಲಾಖೆಯು ಎನ್‌ಐಎಗೆ ಮಾಹಿತಿ ರವಾನಿಸಿದೆ. ಬಂಧಿತ ಆರೋಪಿಗಳಿಬ್ಬರನ್ನು ಎನ್‌ಐಎ ತಂಡ ವಿಚಾರಣೆ ಗೊಳಪ ಡಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News